ಮಾಲೆ (ಮಾಲ್ಡೀವ್ಸ್):ಚೀನಾದ 'ಸಂಶೋಧನಾ ಹಡಗು' ಜಿಯಾನ್ ಯಾಂಗ್ ಹಾಂಗ್ 03 ಆಗಮನವನ್ನು ಮಾಲ್ಡೀವ್ಸ್ ಸರ್ಕಾರ ಮಂಗಳವಾರ ಖಚಿತಪಡಿಸಿದೆ. ಸಂಶೋಧನೆ ಮತ್ತು ಸಮೀಕ್ಷೆ ನಡೆಸಲು ಸಜ್ಜುಗೊಂಡ ಹಡಗಿನ ಡಾಕಿಂಗ್‌ಗೆ ಮಾಲೆ ಸರ್ಕಾರ ಅನುಮತಿ ನೀಡಿದೆ. ಪೋರ್ಟ್ ಕರೆಗಳು, ಸರದಿ ಮತ್ತು ಸಿಬ್ಬಂದಿ ಮರುಪೂರಣಕ್ಕೆ ಅಗತ್ಯ ಅನುಮತಿಗಾಗಿ ಚೀನಾ ಸರ್ಕಾರದಿಂದ ರಾಜತಾಂತ್ರಿಕ ವಿನಂತಿಯನ್ನು ಮಾಡಲಾಗಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಿಯಾಂಗ್ ಯಾಂಗ್ ಹಾಂಗ್ 3 ಎಂಬ ಹಡಗು "ಮಾಲ್ಡೀವಿಯನ್ ಸಮುದ್ರದಲ್ಲಿ ಯಾವುದೇ ಸಂಶೋಧನೆ ನಡೆಸುವುದಿಲ್ಲ". ಮಾಲ್ಡೀವ್ಸ್ ಯಾವಾಗಲೂ "ಸ್ನೇಹಿ ರಾಷ್ಟ್ರಗಳ ಹಡಗುಗಳಿಗೆ" ಸ್ವಾಗತಾರ್ಹ ತಾಣವಾಗಿದೆ ಮತ್ತು ಶಾಂತಿಯುತ ಉದ್ದೇಶಗಳಿಗಾಗಿ ಬಂದರಿಗೆ ಭೇಟಿ ನೀಡುವ ನಾಗರಿಕ ಮತ್ತು ಮಿಲಿಟರಿ ಹಡಗುಗಳಿಗೆ ಆತಿಥ್ಯ ವಹಿಸುತ್ತಿದೆ ಎಂದು ತಿಳಿಸಲಾಗಿದೆ.
"ಇಂತಹ ಬಂದರು ಕರೆಗಳು ಮಾಲ್ಡೀವ್ಸ್ ಮತ್ತು ಅದರ ಪಾಲುದಾರ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವುದಲ್ಲದೆ, ಸ್ನೇಹಪರ ದೇಶಗಳ ಹಡಗುಗಳನ್ನು ಸ್ವಾಗತಿಸುವ ಮಾಲ್ಡೀವಿಯನ್ ಜನರ ಹಳೆಯ ಸಂಪ್ರದಾಯವನ್ನು ಸಹ ಪ್ರದರ್ಶಿಸುತ್ತವೆ" ಎಂದು ಅಲ್ಲಿನ ಸರ್ಕಾರ ಹೇಳಿದೆ.
ಫೆಬ್ರವರಿ 8 ರಂದು ಚೀನಾದ ಹಡಗು ಮಾಲೆ ಬಂದರಿನಲ್ಲಿ ಇಳಿಯುವ ಸಾಧ್ಯತೆಯಿದೆ. ಆದರೆ, ಹಿಂದೂ ಮಹಾಸಾಗರದ ಮೂಲಕ ಚೀನಾ ಹಡಗು ಸಾಗುತ್ತಿರುವುದು ಆತಂಕ ಮೂಡಿಸಿದೆ. ಭಾರತ-ಮಾಲ್ಡೀವ್ಸ್ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ, ಭಾರತವು ಹಡಗಿನ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ವರದಿಯ ಪ್ರಕಾರ, ಚೀನಾದ ಹಡಗು ಭಾರತೀಯ ಸಾಗರದಲ್ಲಿ 'ಸಂಶೋಧನೆ' ನಡೆಸುತ್ತಿರುವುದು ತನ್ನ ಸೇನೆಗೆ ಅಪಾಯವನ್ನುಂಟು ಮಾಡಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.