ಮಾಲೆ(ಮಾಲ್ಡೀವ್ಸ್): ದಶಕಗಳಿಂದ ಮಾಲ್ಡೀವ್ಸ್ ತನ್ನ ಸಾಮರ್ಥ್ಯವನ್ನೂ ಮೀರಿ ಖರ್ಚು ಮಾಡುತ್ತಿದೆ. ಇದರ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದೆ. ಇದು ಆಘಾತ ತರಿಸುವಂತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಮಾಲ್ಡೀವ್ಸ್‌ನ ಸಾರ್ವಜನಿಕವಾಗಿ ಖಾತರಿಪಡಿಸಿದ ಸಾಲವು ಜಿಡಿಪಿಯ ಶೇ.110ರಷ್ಟಿದೆ ಎಂದು ಹಣಕಾಸು ಸಚಿವಾಲಯ ಕೆಲ ದಿನಗಳ ಹಿಂದೆ ಹೇಳಿತ್ತು. ಇದರ ಬೆನ್ನಲ್ಲೇ ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾದ ವಿಶ್ವಬ್ಯಾಂಕ್ ನಿರ್ದೇಶಕ ಫಾರಿಸ್ ಹೆಚ್ ಹದಾದ್-ಜರ್ವೋಸ್, ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಪ್ರಸ್ತುತ ಮತ್ತು ಮುಂದಿನ ವರ್ಷಕ್ಕೆ 512 ಮಿಲಿಯನ್ ಡಾಲರ್ ಆಗಲಿದ್ದು, 2026ರ ವೇಳೆಗೆ ಇದು 1.07 ಬಿಲಿಯನ್ ಡಾಲರ್ಗೆ ತಲುಪಬಹದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಜೂನ್ 1ರಂದು ಪ್ರಕಟವಾದ ಹಣಕಾಸು ಸಚಿವಾಲಯದ 2024ರ ಮೊದಲ ತ್ರೈಮಾಸಿಕ ಸಾಲದ ಬುಲೆಟಿನ್ ಪ್ರಕಾರ, ಸಾರ್ವಜನಿಕವಾಗಿ ಖಾತರಿಪಡಿಸಿದ ಸಾಲ 8.2 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದು ಮಾಲ್ಡೀವ್ಸ್‌ನ ಜಿಡಿಪಿಯ ಶೇ.110ರಷ್ಟು. ವರ್ಷದ ಮೊದಲ ಮೂರು ತಿಂಗಳಲ್ಲಿ ರಾಜ್ಯದ ಸಾಲವು 90.8 ಮಿಲಿಯನ್ ಡಾಲರ್ಗಳಷ್ಟು ಏರಿಕೆಯಾಗಿದೆ. 2023ರ ಅಂತ್ಯದ ವೇಳೆಗೆ ಒಟ್ಟು ಸಾಲ 8.09 ಬಿಲಿಯನ್ ಡಾಲರ್ಗೆ ತಲುಪಿತ್ತು. ಪ್ರವಾಸೋದ್ಯಮವನ್ನೇ ನಂಬಿರುವ ಮಾಲ್ಡೀವ್ಸ್, ಕೋವಿಡ್ ಲಾಕ್‌ಡೌನ್‌ನಿಂದಾಗಿ ಭಾರೀ ಸಂಕಷ್ಟ ಅನುಭವಿಸಿತ್ತು. 2023ರಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿದೆ.
ಇದು ಸಮರ್ಥಿಸಲಾಗದ ಸಾಲ:ಈಗ ಉನ್ನತ ವಿಶ್ವಬ್ಯಾಂಕ್ ಅಧಿಕಾರಿ ಹದದ್-ಜೆರ್ವೋಸ್, ದಶಕಗಳಿಂದ ಮಾಲ್ಡೀವ್ಸ್ ತನ್ನ ಶಕ್ತಿ ಮೀರಿ ಖರ್ಚು ಮಾಡುತ್ತಿದೆ. ಖರ್ಚಿನ ಏರಿಕೆ ಮತ್ತು ಸಬ್ಸಿಡಿಗಳು ಆರ್ಥಿಕ ಕೊರತೆಯನ್ನು ಹೆಚ್ಚಿಸಿವೆ. ಇದು ದುರ್ಬಲ ಹಣಕಾಸಿನ ಪರಿಸ್ಥಿತಿ ಮತ್ತು ಸಮರ್ಥಿಸಲಾಗದ ಸಾಲಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ, ತುರ್ತು ಹಣಕಾಸಿನ ಸುಧಾರಣೆಗಳನ್ನು ಅವರು ಸೂಚಿಸಿದ್ದಾರೆ.
ಸುಧಾರಣಾ ಕ್ರಮಗಳು:ಸಬ್ಸಿಡಿಗಳನ್ನು ಹಂತಹಂತವಾಗಿ ತೆಗೆದುಹಾಕುವುದು, ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸಂಕಷ್ಟ ಪರಿಹರಿಸುವುದು, ಆರೋಗ್ಯ ವೆಚ್ಚದ ದಕ್ಷತೆ ಸುಧಾರಿಸುವುದು ಮತ್ತು ಸಾರ್ವಜನಿಕ ಹೂಡಿಕೆ ಕಾರ್ಯಗಳನ್ನು ಸುಗಮಗೊಳಿಸುವ ಅಗತ್ಯವಿದೆ. ತಗ್ಗಿದ ಪ್ರವಾಸೋದ್ಯಮವು ರಾಷ್ಟ್ರದ ಆರ್ಥಿಕ ಎಂಜಿನ್ ಮತ್ತು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದ ಎಂದು ತಿಳಿಸಿರುವ ಅವರು, ವಿಡಿಯೋ ಸಂದೇಶವನ್ನೂ ಸಹ ಪೋಸ್ಟ್ ಮಾಡಿದ್ದಾರೆ.