ವಾಷಿಂಗ್ಟನ್, ಅಮೆರಿಕ: ರಿಪಬ್ಲಿಕನ್ ನೇತೃತ್ವದ ಅಮೆರಿಕದ ಸೆನೆಟ್ ಗುರುವಾರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನ ಮುಂದಿನ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ಆಯ್ಕೆ ಮಾಡಿದೆ. ಯುಎಸ್ ನ ಪ್ರಧಾನ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿರುವ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಕಾಶ್ ಪಟೇಲ್ ಪಾತ್ರರಾಗಿದ್ದಾರೆ.
ಪಟೇಲ್ 51 - 49 ಮತಗಳ ಅಂತರದಿಂದ ವಿಶ್ವದ ಅತ್ಯಂತ ದೊಡ್ಡ ತನಿಖಾ ಸಂಸ್ಥೆಯೊಂದರ ಮಹತ್ವದ ಹುದ್ದೆಗೆ ಆಯ್ಕೆ ಆಗಿದ್ದಾರೆ. ವಿಶೇಷ ಎಂದರೆ ಕಾಶ್ ಪಟೇಲ್ ಆಯ್ಕೆಗೆ ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳು ವಿರೋಧ ವ್ಯಕ್ತಪಡಿಸಿದರು. ಸಹಜವಾಗಿ ವಿರೋಧ ಪಕ್ಷ ಡೆಮಾಕ್ರಟಿಕ್ ನ ಸೆನೆಟರ್ ಗಳು ಕಾಶ್ ಪಟೇಲ್ ವಿರುದ್ಧ ಮತ ಚಲಾಯಿಸಿದರು.
ಸೆನಟ್ ನಲ್ಲಿ ರಿಪಬ್ಲಿಕನ್ ಪಕ್ಷ 53 ಸದಸ್ಯ ಬಲದೊಂದಿಗೆ ಬಹುಮತ ಹೊಂದಿದೆ. ಇನ್ನು ಪ್ರತಿಪಕ್ಷ ಡೆಮಾಕ್ರಟಿಕ್ ನ 47 ಸದಸ್ಯರಿದ್ದಾರೆ.
ಕಾಶ್ ಪಟೇಲ್ ವಿಶ್ವದ ಪ್ರಬಲ ಹಾಗೂ ಪ್ರಖ್ಯಾತ ತನಿಖಾ ಸಂಸ್ಥೆ ಎಫ್ ಬಿಐನ ಡೈರೆಕ್ಟರ್ ಆಗುವ ಮೂಲಕ ಕೇವಲ ಮೊದಲ ಭಾರತೀಯ ಮೂಲದ ಅಷ್ಟೇ ಅಲ್ಲದೇ ಈ ಸ್ಥಾನವನ್ನು ಅಲಂಕರಿಸಿದ ಮೊದಲ ಏಷ್ಯನ್-ಅಮೆರಿಕನ್ ಆಗಿಯೂ ಇತಿಹಾಸವನ್ನು ನಿರ್ಮಿಸಿದ್ದಾರೆ. ಅಷ್ಟೇ ಏಕೆ ಇತಿಹಾಸದಲ್ಲಿ ಅವರು ತಮ್ಮ ಸ್ಥಾನವನ್ನು ಅಜರಾಮರವಾಗಿಸಿದ್ದಾರೆ.
ಕಾಶ್ ನಾಮ ನಿರ್ದೇಶನವನ್ನು ವಿರೋಧಿಸಿದ ಆಡಳಿತಾರೂಢ ಸೆನೆಟರ್ ಸುಸಾನ್ ಕಾಲಿನ್ಸ್ ಮಾತನಾಡಿ, ಪಟೇಲ್ ತಾವು ಬರೆದ ಪುಸ್ತಕದಲ್ಲಿ ಹಲವಾರು ರಾಜಕೀಯ ಆರೋಪದ ಹೇಳಿಕೆಗಳನ್ನು ನೀಡಿದ್ದಾರೆ. ಹಾಗೂ ಕೆಲವು ಕಡೆ ಎಫ್‌ಬಿಐ ಕಾರ್ಯವನ್ನು ಅಪಖ್ಯಾತಿಗೊಳಿಸಿದ್ದಾರೆ. ಎಫ್‌ಬಿಐ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಅವರ ಸಾಮರ್ಥ್ಯದ ಮೇಲೆ ಅನುಮಾನ ಮೂಡಿಸಿದೆ ಎಂದು ಹೇಳಿದರು.
ಇನ್ನುಸಹಜವಾಗಿಯೇ ಡೆಮಾಕ್ರಾಟ್ ಗಳು ಪಟೇಲ್ ಅವರ ನಾಮನಿರ್ದೇಶನವನ್ನು ವಿರೋಧಿಸಿದ್ದಾರೆ.
ಇದನ್ನು ಓದಿ:ಭಾರತದಲ್ಲಿ 'ಬೇರೆ'ಯವರ ಸರ್ಕಾರ ರಚನೆಗೆ ಸಂಚು ನಡೆದಿತ್ತು: ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ