ಓಸ್ಲೋ(ನಾರ್ವೆ): ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತು ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಜಪಾನಿನ ಸಂಸ್ಥೆ 'ನಿಹಾನ್ ಹಿಡಂಕ್ಯೊ'ಗೆ 2024ರ ಪ್ರತಿಷ್ಟಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇಂದು ಪ್ರಕಟಿಸಲಾಯಿತು.
ನಿಹಾನ್ ಹಿಡಂಕ್ಯೊ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲಿನ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರ ಸಂಘಟನೆ. 1956ರಲ್ಲಿ ಸ್ಥಾಪನೆಯಾದ ನಿಹಾನ್ ಹಿಡಂಕ್ಯೊ ಪರಮಾಣು ಬಾಂಬ್ ಬದುಕುಳಿದವರ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಯಾಗಿದೆ.
"ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನಿಷೇಧಿಸಬೇಕೆಂಬ ಒತ್ತಡದಲ್ಲಿರುವ ಈ ಸಂದರ್ಭದಲ್ಲಿ ನಿಹಾನ್ ಹಿಡಂಕ್ಯೊ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ" ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಅಧ್ಯಕ್ಷ ಜರ್ಗೆನ್ ವಾಟ್ನೆ ಫ್ರೈಡ್ನೆಸ್ ಹೇಳಿದರು.
"ನಾವು ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಗೌರವಿಸಲು ಬಯಸುತ್ತೇವೆ. ಅವರು ದೈಹಿಕ ನೋವಿನ ಹೊರತಾಗಿಯೂ ಜಾಗತಿಕ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ" ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಶ್ಲಾಘಿಸಿದೆ.