ಬೈರುತ್:ದಕ್ಷಿಣ ಮತ್ತು ಪೂರ್ವ ಲೆಬನಾನ್ನ ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಸುಮಾರು 60 ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ.
"ಇಸ್ರೇಲ್ ವಿಮಾನಗಳು ಗುರುವಾರ ಲೆಬನಾನ್ ಮೇಲೆ ಸುಮಾರು 150 ಕ್ಷಿಪಣಿಗಳನ್ನು ಹಾರಿಸಿವೆ" ಎಂದು ಮೂಲಗಳು ಹೇಳಿವೆ. "ತೀವ್ರ ದಾಳಿಯಿಂದ ಉಂಟಾದ ಸಾವುನೋವು ಮತ್ತು ಹಾನಿಯ ವಿವರ ಈವರೆಗೂ ತಿಳಿದು ಬಂದಿಲ್ಲ. ಇದು ಅಕ್ಟೋಬರ್ 8ರ ನಂತರ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ" ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ಗಳು ಧ್ವಂಸ: ಸುಮಾರು 1,000 ಬ್ಯಾರೆಲ್ಗಳನ್ನು ಒಳಗೊಂಡ 100 ರಾಕೆಟ್ ಲಾಂಚರ್ಗಳನ್ನು ತನ್ನ ವಾಯುಪಡೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಮಧ್ಯಾಹ್ನ ಪ್ರಾರಂಭವಾದ ತೀವ್ರಗತಿಯ ದಾಳಿಯು ಮಧ್ಯರಾತ್ರಿಗೆ ಮೊದಲು ಪೂರ್ಣಗೊಂಡಿದೆ ಎಂದು ಅದು ಘೋಷಿಸಿದೆ. ಇಸ್ರೇಲಿ ಯುದ್ಧ ವಿಮಾನಗಳು ರಾತ್ರೋರಾತ್ರಿ ಗಡಿಯ ಸಮೀಪವಿರುವ ಹಳ್ಳಿಗಳ ಮೇಲೆ ದಾಳಿ ನಡೆಸಿದವು ಮತ್ತು ವೈಮಾನಿಕ ದಾಳಿಗಳು ಗುರುವಾರ ಮಧ್ಯಾಹ್ನ ಪುನರಾರಂಭಗೊಂಡವು ಎಂದು ವರದಿಯಾಗಿದೆ. ಈ ದಾಳಿಯನ್ನು ಇಸ್ರೇಲ್ ಅಧಿಕೃತವಾಗಿ ದೃಢಪಡಿಸದಿದ್ದರೂ, ಇದು ಹಿಜ್ಬುಲ್ಲಾದ ಸಂಪರ್ಕ ಜಾಲವನ್ನು ಧ್ವಂಸಗೊಳಿಸಲು ಮೊಸ್ಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.