ಹೈದರಾಬಾದ್: ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಸೋಮವಾರ ತಡರಾತ್ರಿ ಗಾಜಾಪಟ್ಟಿಯಲ್ಲಿ ಮತ್ತೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ರೀಮ್ ಅಬು ಹಯಾಹ್ ಎಂಬ ಮೂರು ತಿಂಗಳ ಕೂಸನ್ನು ಹೊರತುಪಡಿಸಿ, ಕುಟುಂಬ ಸದಸ್ಯರೆಲ್ಲಾ ಸಾವನ್ನಪ್ಪಿದ್ದಾರೆ. ಅದೇ ರೀತಿ ಮತ್ತೊಂದು ದಾಳಿಯಲ್ಲಿ ಅಬುಯೆಲ್ ಕೊಮಾಸನ್ ಎಂಬ ವ್ಯಕ್ತಿ ತನ್ನ ಹೆಂಡತಿ, ನಾಲ್ಕು ದಿನಗಳ ಅವಳಿ ಮಕ್ಕಳನ್ನು ಕಳೆದುಕೊಂಡಿದ್ದಾರೆ.
ಕಳೆದ 10 ತಿಂಗಳ ಹಿಂದೆ ಹಮಾಸ್ ಆರಂಭಿಸಿದ ಯುದ್ಧದ ಬಳಿಕ ಇಸ್ರೇಲ್ ಗಾಜಾ ಪಟ್ಟಿಯಲ್ಲಿನ ಹಮಾಸ್ ನೆಲೆಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ಮಾಡುತ್ತಿದೆ. ಇದರಿಂದಾಗಿ ಅನೇಕ ಮಂದಿ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದರೆ, ಮತ್ತೆ ಕೆಲವು ಪೋಷಕರು ತಮ್ಮ ಕಣ್ಣೆದುರೇ ಮಕ್ಕಳು ಸಾವನ್ನಪ್ಪಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ.
ಸೋಮವಾರ ತಡರಾತ್ರಿ ಇಸ್ರೇಲ್ ಸೇನೆಯು ದಕ್ಷಿಣ ನಗರ ಖಾನ್ ಯೂನಿಸ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಬು ಹಯಾಹ್ ಮಗುವೊಂದು ಬದುಕಿದ್ದು, ತಮ್ಮ ಒಡಹುಟ್ಟಿದವರು, ಪೋಷಕರನ್ನು ಕಳೆದುಕೊಂಡು ಅನಾಥವಾಗಿದೆ. ತನ್ನವರನ್ನು ಕಳೆದುಕೊಂಡ ಅರಿವಿಲ್ಲದ ಮಗು ಇದೀಗ ಅಮ್ಮನ ಹಾಲಿಗೆ ಹಾತೊರೆಯುತ್ತಿದ್ದು, ಬೇರೆ ಏನನ್ನು ತಿನ್ನುತ್ತಿಲ್ಲ. ಆಕೆಗೆ ನಾವು ಏನೆಲ್ಲಾ ಕಸರತ್ತು ಮಾಡಿ ತಿನ್ನಿಸಲು ಮುಂದಾದರೂ ಮಗು ಊಟ ಸೇವಿಸುತ್ತಿಲ್ಲ ಎಂದು ಮಗುವಿನ ಚಿಕ್ಕಮ್ಮ ಸೋದ್ ಅಬುಹಯ್ಯ ಅಳಲು ತೋಡಿಕೊಂಡಿದ್ದಾರೆ.
ಅಬುಯೆಲ್ ಕೊಮಸನ್ ಕೂಡ ಈ ಘಟನೆಯಲ್ಲಿ ಹೆಂಡತಿ, ಅವಳಿ ನವಜಾತ ಶಿಶುಗಳು ಸೇರಿದಂತೆ ಎಲ್ಲಾ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ.