ಗಾಜಾ ಪಟ್ಟಿ : ಕದನದ ವಿರಾಮದ ಒಪ್ಪಂದದಂತೆ ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲ್ನ ಮೂವರು ಪುರುಷ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು. ಈ ಬಿಡುಗಡೆಗೂ ಮುನ್ನ ದಕ್ಷಿಣ ಗಾಜಾ ಪಟ್ಟಿಯಲ್ಲಿ ಜನ ಸಮೂಹದ ಮುಂದೆ ಬೃಹತ್ ಮೆರವಣಿಗೆ ನಡೆಸಲಾಯಿತು.
ಇಸ್ರೇಲ್ ಮತ್ತು ಅರ್ಜೆಂಟೀನಾದ ಉಭಯ ಪೌರತ್ವ ಹೊಂದಿದ ಇಯರ್ ಹಾರ್ನ್ (46), ಅಮೇರಿಕನ್ ಹಾಗೂ ಇಸ್ರೇಲಿಗ ಸಾಗಿ ಡೆಕೆಲ್ ಚೆನ್ (36) ಹಾಗೂ ರಷ್ಯನ್ ಇಸ್ರೇಲಿ ಅಲೆಕ್ಸಾಂಡರ್ (ಸೌಶಾ) ಟ್ರೌಫಾನೊವ್ (29) ಇವರನ್ನು ರೆಡ್ಕ್ರಾಸ್ ಇಸ್ರೇಲ್ ಸೇನೆಗೆ ಹಸ್ತಾಂತರಿಸಿತು. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಅವರ ಸಂಬಂಧಿಕರ ಜೊತೆ ಸೇರಿಸಲಾಗುವುದು. ಟೆಲ್ ಅವಿವಾ ಒತ್ತೆಯಾಳುಗಳ ಸ್ಕ್ವಾರ್ನಲ್ಲಿ ಮೂವರನ್ನು ರೆಡ್ಕ್ರಾಸ್ನಿಂದ ಹಸ್ತಾಂತರಿಸುವ ಪ್ರಕ್ರಿಯೆ ಸಾಗಿತ್ತು. ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಕೂಡ ಸಾಗಿದೆ.
ಇವರನ್ನು 2023ರ ಅಕ್ಟೋಬರ್ 7ರಂದು ಯುದ್ಧ ಆರಂಭವಾದಾಗ ಹಮಾಸ್ ಪಡೆ ಅಪಹರಣ ಮಾಡಿತ್ತು. 16 ತಿಂಗಳ ಬಳಿಕ ಬಿಡುಗಡೆಯಾದ ಮೂವರು ನೋಡಲು ಸೊರಗಿದಂತೆ ಕಂಡರೂ ದೈಹಿಕವಾಗಿ ಉತ್ತಮವಾಗಿರುವುದು ಕಂಡು ಬಂದಿತು. ನಾಲ್ಕು ವಾರಗಳ ಹಿಂದೆ ಉಂಟಾದ ಕದನವಿರಾಮದಿಂದ ಹಮಾಸ್ ಕೈದಿಗಳು ಮತ್ತು ಇಸ್ರೇಲ್ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಸಾಗಿದೆ. ಆದರೆ, ಇತ್ತೀಚಿಗೆ ಅದು ಉದ್ವಿಗ್ನಗೊಂಡಿದ್ದು, ಮತ್ತೆ ಯುದ್ಧದ ಭೀತಿ ಮೂಡಿಸಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗಾಜಾದಿಂದ 2 ಮಿಲಿಯನ್ ಪ್ಯಾಲೆಸ್ತೇನಿಯರನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಪ್ರಸ್ತಾಪವನ್ನು ಇರಿಸಿರುವುದು ಭವಿಷ್ಯದ ಕದನವಿರಾಮದ ಮೇಲೆ ಅನುಮಾನ ಹುಟ್ಟುಹಾಕಿದೆ.