ಕರ್ನಾಟಕ

karnataka

ಹಮಾಸ್​ ವಿರುದ್ಧ ನಿರ್ಣಾಯಕ ಕಾರ್ಯಾಚರಣೆಗೆ ಸಿದ್ಧತೆ: ರಫಾದಲ್ಲಿ ನಹಾಲ್ ಬ್ರಿಗೇಡ್ ನಿಯೋಜಿಸಿದ ಐಡಿಎಫ್​ - Rafah Ground Invasion

By ETV Bharat Karnataka Team

Published : Apr 25, 2024, 4:30 PM IST

ರಫಾದಲ್ಲಿ ನಿರ್ಣಾಯಕ ಯುದ್ಧ ಆರಂಭಿಸಲು ಇಸ್ರೇಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

IDF deploys elite brigade in Rafah as Israel prepares for ground invasion
IDF deploys elite brigade in Rafah as Israel prepares for ground invasion

ಚೆನ್ನೈ: ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯು ತನ್ನ ಯುದ್ಧ ಪರಿಣಿತ ನಹಾಲ್ ಬ್ರಿಗೇಡ್ ಅನ್ನು ಗಾಜಾ ಪಟ್ಟಿಯ ರಫಾ ಪ್ರದೇಶದಲ್ಲಿ ನಿಯೋಜಿಸಿದೆ. ಹೀಗಾಗಿ ರಫಾದಲ್ಲಿ ಇಸ್ರೇಲ್ ನೆಲದ ಆಕ್ರಮಣ ಕಾರ್ಯಾಚರಣೆ ಆರಂಭಿಸುವುದು ಬಹುತೇಕ ಖಚಿತವಾದಂತಾಗಿದೆ. ಅಮೆರಿಕ ಮತ್ತು ತನ್ನ ಇತರ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳ ಆಕ್ಷೇಪಕ್ಕೆ ಸೊಪ್ಪು ಹಾಕದ ಇಸ್ರೇಲ್ ರಫಾದಲ್ಲಿ ನೆಲದ ಕಾರ್ಯಾಚರಣೆಗಾಗಿ ಸಿದ್ಧತೆ ನಡೆಸುತ್ತಿದೆ.

ಉತ್ತರ ಗಾಜಾದಲ್ಲಿದ್ದ ಐಡಿಎಫ್​ನ ಯುಫ್ತಾ ಶಸ್ತ್ರಸಜ್ಜಿತ ಬ್ರಿಗೇಡ್ ಮತ್ತು ಕಾರ್ಮೆಲಿ ಇನ್ಫೆಂಟ್ರಿ ಬ್ರಿಗೇಡ್​ಗಳನ್ನು ಮಧ್ಯ ಗಾಜಾಕ್ಕೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಮಧ್ಯ ಗಾಜಾದಲ್ಲಿದ್ದ ನಹಾಲ್ ಬ್ರಿಗೇಡ್​ ಅನ್ನು ರಫಾಗೆ ಕಳುಹಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ನಹಾಲ್ ಬ್ರಿಗೇಡ್ ಮಧ್ಯ ಗಾಜಾ ಪಟ್ಟಿಯಲ್ಲಿ ಮತ್ತು ಹಮಾಸ್​ನ ಭದ್ರಕೋಟೆಯಾದ ಖಾನ್ ಯೂನಿಸ್ ಪ್ರದೇಶದಲ್ಲಿ ನಡೆದ ನೆಲದ ಆಕ್ರಮಣದಲ್ಲಿ ಭಾಗಿಯಾಗಿತ್ತು ಎಂಬುದು ಗಮನಾರ್ಹ. ರಫಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಸ್ರೇಲ್ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡ ನಂತರ ನಹಾಲ್ ಬ್ರಿಗೇಡ್ ರಫಾದಲ್ಲಿ ನೆಲದ ಆಕ್ರಮಣದ ನೇತೃತ್ವ ವಹಿಸಲಿದೆ ಎಂದು ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಗಾಜಾ ಪಟ್ಟಿಯಲ್ಲಿ ಹಮಾಸ್​ನ ಇನ್ನೂ ಆರು ಬೆಟಾಲಿಯನ್​ಗಳು ಉಳಿದುಕೊಂಡಿವೆ ಹಾಗೂ ಇದರ ಪೈಕಿ ನಾಲ್ಕು ಬೆಟಾಲಿಯನ್​ಗಳು ರಫಾದಲ್ಲಿವೆ ಎಂದು ಐಡಿಎಫ್ ಹೇಳಿದೆ. ರಫಾ ವಶಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರದ ಅನುಮೋದನೆ ದೊರೆತ ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಐಡಿಎಫ್​ ಇಸ್ರೇಲ್ ಯುದ್ಧ ಕ್ಯಾಬಿನೆಟ್​ಗೆ ತಿಳಿಸಿದೆ.

ಏತನ್ಮಧ್ಯೆ, ಐಡಿಎಫ್ ಸೇನಾಪಡೆಯ ಮುಖ್ಯಸ್ಥ ಹರ್ಜಿ ಹಲೇವಿ ಮತ್ತು ಶಿನ್ ಬೆಟ್ ಮುಖ್ಯಸ್ಥ ರೋನೆನ್ ಬಾರ್ ಸೇರಿದಂತೆ ಉನ್ನತ ಇಸ್ರೇಲಿ ಅಧಿಕಾರಿಗಳು ಈಜಿಪ್ಟ್ ತಲುಪಿದ್ದು, ಈಜಿಪ್ಟ್​ನ ಗುಪ್ತಚರ ಇಲಾಖೆ ಮುಖ್ಯಸ್ಥ ಅಬ್ಬಾಸ್ ಕಾಮೆಲ್ ಮತ್ತು ಸೇನಾಪಡೆ ಮುಖ್ಯಸ್ಥ ಒಸಾಮಾ ಅಸ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

ರಫಾ ಮೇಲೆ ದಾಳಿ ಆರಂಭವಾದಲ್ಲಿ ಅಪಾರ ಪ್ರಮಾಣದ ನಾಗರಿಕರ ಸಾವು ನೋವು ಉಂಟಾಗಬಹುದು ಮತ್ತು ರಫಾ ಗಡಿಗೆ ಹೊಂದಿಕೊಂಡಿರುವ ತನ್ನ ದೇಶದ ಸಿನಾಯ್ ಪ್ರದೇಶಕ್ಕೆ ಭಾರಿ ಪ್ರಮಾಣದಲ್ಲಿ ನಿರಾಶ್ರಿತರು ಬರಬಹುದು ಎಂದು ಈಜಿಪ್ಟ್​ ಈಗಾಗಲೇ ಕಳವಳ ವ್ಯಕ್ತಪಡಿಸಿದೆ. ಹಮಾಸ್ ವಿರುದ್ಧ ಸಂಪೂರ್ಣ ವಿಜಯ ಸಾಧಿಸಬೇಕಾದರೆ ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲೇಬೇಕಾಗುತ್ತದೆ ಎಂದು ಮೊಸ್ಸಾದ್ ಮತ್ತು ಶಿನ್ ಬೆಟ್ ಸೇರಿದಂತೆ ಇಸ್ರೇಲ್ ಗುಪ್ತಚರ ಸಂಸ್ಥೆಗಳು ಇಸ್ರೇಲ್ ಯುದ್ಧ ಕ್ಯಾಬಿನೆಟ್​ಗೆ ಮಾಹಿತಿ ನೀಡಿವೆ.

ಇದನ್ನೂ ಓದಿ : ಅಫ್ಘಾನಿಸ್ತಾನ ಸರ್ಕಾರದೊಂದಿಗೆ ರಷ್ಯಾ ಮಾತುಕತೆ: ಯುಎನ್​ ಪ್ರತಿನಿಧಿ ಸ್ಥಾನಕ್ಕೆ ತಾಲಿಬಾನ್ ಬೇಡಿಕೆ - Taliban Russia Talks

ABOUT THE AUTHOR

...view details