ವಾಷಿಂಗ್ಟನ್: ಆಗಸ್ಟ್ 18ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಐತಿಹಾಸಿಕ ಭಾರತ ದಿನದ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿಯ ಪ್ರದರ್ಶನ ನಡೆಯಲಿದೆ. ಈ ಮೂಲಕ ನ್ಯೂಯಾರ್ಕ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ನೆಲೆಸಿರುವ ಸಾವಿರಾರು ಭಾರತೀಯರನ್ನು ಪರೇಡ್‌ಗೆ ಆಕರ್ಷಿಸಲಾಗುತ್ತಿದೆ.
ಈ ಪ್ರತಿಕೃತಿ 18 ಅಡಿ ಉದ್ದ, 9 ಅಡಿ ಅಗಲ ಮತ್ತು 8 ಅಡಿ ಎತ್ತರ ಇರಲಿದೆ. ಅಮೆರಿಕ ವಿಶ್ವ ಹಿಂದು ಪರಿಷತ್ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಮಾತನಾಡಿ, "ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ಪ್ರದರ್ಶನ ಮಾಡಲಾಗುತ್ತಿದೆ" ಎಂದರು.
ಏನಿದು ಭಾರತ ದಿನದ ಪರೇಡ್?: ಇದು ಭಾರತದ ಹೊರಗೆ ನಡೆಯುವ ಅತಿ ದೊಡ್ಡ ಸ್ವಾತಂತ್ರ್ಯ ದಿನಾಚರಣೆ. ನ್ಯೂಯಾರ್ಕ್ನಲ್ಲಿ ಪ್ರತಿ ವರ್ಷ ಇಂಡಿಯಾ ಡೇ ಪರೇಡ್ ನಡೆಸಲಾಗುತ್ತದೆ. ಈಸ್ಟ್ 38ನೇ ಸ್ಟ್ರೀಟ್ನಿಂದ ಈಸ್ಟ್ 27ನೇ ಸ್ಟೀಟ್ವರೆಗೆ ಪರೇಡ್ ಸಾಗುತ್ತದೆ. ಈ ಕಾರ್ಯಕ್ರಮವನ್ನು ಸುಮಾರು 1,50,00 ಮಂದಿ ವೀಕ್ಷಿಸುತ್ತಾರೆ.
ಭಾರತ ದಿನದ ಪರೇಡ್‌ನಲ್ಲಿ ಭಾರತದ ಧ್ವಜಗಳನ್ನು ಕಾಣಬಹುದು. ಮೆರವಣಿಗೆ ಮುಗಿದ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ಲಿನ ಭಾರತೀಯ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ನೃತ್ಯ ಶಾಲೆಗಳಿಂದ ಪ್ರದರ್ಶನಗಳು ನಡೆಯುತ್ತವೆ.
ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) ಆಯೋಜಿಸಿರುವ ಈ ಪೆರೇಡ್ನಲ್ಲಿ ಭಾರತದ ಅಮೆರಿಕನ್ ಸಮುದಾಯವನ್ನು ಪ್ರತಿನಿಧಿಸುವ ಅನೇಕ ಅಂಶಗಳಿರುತ್ತವೆ. ಈ ಮೂಲಕ ನ್ಯೂಯಾರ್ಕ್ನ ಬೀದಿಗಳಲ್ಲಿ ಭಾರತೀಯ ಸಂಸ್ಕೃತಿಗಳ ವೈವಿಧ್ಯತೆಯ ಪ್ರದರ್ಶನ ನಡೆಯುತ್ತದೆ. ವಿಎಚ್‌ಪಿಎ-ಎ ಇತ್ತೀಚೆಗೆ ರಾಮಮಂದಿರ ರಥಯಾತ್ರೆ ಆಯೋಜಿಸಿತ್ತು. ದೇಶದ 48 ರಾಜ್ಯಗಳಲ್ಲಿ 60 ದಿನಗಳ ಕಾಲ 851 ದೇವಸ್ಥಾನಗಳಿಗೆ ಈ ಯಾತ್ರೆ ಭೇಟಿ ನೀಡಿತ್ತು. ಇದೇ ರೀತಿಯ ರಾಮ ಮಂದಿರ ರಥಯಾತ್ರೆಯನ್ನು ಕೆನಡಾದಲ್ಲೂ ಆಯೋಜಿಸಲಾಗಿದ್ದು, ಯಾತ್ರೆ 150 ದೇಗುಲಗಳಿಗೆ ಭೇಟಿ ನೀಡಿತ್ತು.(ಪಿಟಿಐ)
ಇದನ್ನೂ ಓದಿ: ಬ್ರಿಟನ್ ಸಂಸತ್ತು ಚುನಾವಣೆ; ರಿಷಿ ಸುನಕ್ಗೆ ಅಧಿಕಾರ ಉಳಿಸಿಕೊಳ್ಳುವ ಸವಾಲು!