ಲಂಡನ್: ಬ್ರಿಟನ್‌ನಲ್ಲಿ ಹೊಸ ಹೌಸ್ ಆಫ್ ಕಾಮನ್ಸ್ಗೆ ಜುಲೈ 4ರಂದು ಚುನಾವಣೆ ನಡೆಯಲಿದೆ. ಹಲವು ಕ್ಷೇತ್ರಗಳಲ್ಲಿ 650 ಸಂಸದರ ಆಯ್ಕೆಗೆ ಮತದಾರರು ಮತದಾನ ಮಾಡಲಿದ್ದಾರೆ. ಅತಿಹೆಚ್ಚು ಸಂಸದರು ಗೆಲ್ಲುವ ಪಕ್ಷದ ನಾಯಕ ಪ್ರಧಾನಿ ಆಗಲಿದ್ದಾರೆ. ಹಾಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ಸ್ ಪಕ್ಷಕ್ಕೆ ಈ ಬಾರಿ ಪ್ರತಿಪಕ್ಷ ಲೇಬರ್ ಪ್ರಬಲ ಸ್ಪರ್ಧೆವೊಡ್ಡಿದೆ. 14 ವರ್ಷಗಳು ಆಡಳಿತ ನಡೆಸಿರುವ ಕನ್ಸರ್ವೇಟಿವ್ಸ್ ಪಕ್ಷವು ಐವರು ಪ್ರಧಾನಿಗಳನ್ನು ಕಂಡಿದೆ. ಈ ಚುನಾವಣೆಯಲ್ಲಿ ಲೇಬರ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ.
ಕನ್ಸರ್ವೇಟಿವ್ಸ್ ಮತ್ತು ಲೇಬರ್ ಪಕ್ಷಗಳು ಸಾಂಪ್ರದಾಯಿಕವಾಗಿ ಬ್ರಿಟನ್‌ನ ಫಸ್ಟ್ ಪಾಸ್ಟ್ ದಿ ಪೋಸ್ಟ್ ಚುನಾವಣಾ ವ್ಯವಸ್ಥೆಯಡಿ ಬ್ರಿಟಿಷ್ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದೆ. ಇದರ ನಡುವೆ ಲಿಬರಲ್ ಡೆಮೋಕ್ರಾಟ್ಸ್, ರಿಫಾರ್ಮ್ ಯುಕೆ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ ಮತ್ತು ಗ್ರೀನ್ಸ್ ಸೇರಿ ಮುಂತಾದ ಸಣ್ಣ ಪಕ್ಷಗಳು ತಮ್ಮ ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯಕ್ಕಾಗಿ ಪ್ರಯತ್ನ ನಡೆಸುತ್ತಿವೆ.
ರಿಷಿ ಸುನಕ್ ಪರಿಸ್ಥಿತಿ ಏನು?: ಸದ್ಯ ಕನ್ಸರ್ವೇಟಿವ್ಸ್ ಪಕ್ಷ ಆಡಳಿತದಲ್ಲಿದೆ. ಪ್ರಧಾನಿ, 44 ವರ್ಷದ ರಿಷಿ ಸುನಕ್ ಈ ಪಕ್ಷದ ನಾಯಕರಾಗಿದ್ದಾರೆ. ಸುನಕ್ 2022ರ ಅಕ್ಟೋಬರ್ನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಲಿಜ್ ಟ್ರಸ್ ಅಲ್ಪಾವಧಿಯ ಅವಧಿ ನಂತರ ಪ್ರಕ್ಷುಬ್ಧತೆಯ ಸ್ಥಿತಿಯಲ್ಲಿ ಕನ್ಸರ್ವೇಟಿವ್ ಪಕ್ಷ ಮತ್ತು ಆರ್ಥಿಕತೆ ಬಿಕ್ಕಟ್ಟಿನಲ್ಲಿ ಅಧಿಕಾರವನ್ನು ಸುಕನ್ ವಹಿಸಿದ್ದರು. ಆಕ್ಸ್‌ಫರ್ಡ್ ಪದವೀಧರ ಮತ್ತು ಮಾಜಿ ಗೋಲ್ಡ್‌ಮನ್ ಸ್ಯಾಚ್ಸ್ ಹೆಡ್ಜ್ ಫಂಡ್ ಮ್ಯಾನೇಜರ್ ಆಗಿರುವ ಭಾರತದ ಮೂಲದ ಸುಕನ್, ಪ್ರಧಾನಿಯಾದ ಮೊದಲ ಹಿಂದೂ ಕೂಡ ಹೌದು. ಸುನಕ್ ತಾವು ಪರಿಸ್ಥಿತಿಯನ್ನು ಸ್ಥಿರಗೊಳಿಸಿದ ವ್ಯಕ್ತಿ ಎಂದು ಒತ್ತಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇವರಿಗೆ ರಾಜಕೀಯ ತೀರ್ಮಾನದ ಕೊರತೆಯಿದೆ ಮತ್ತು ಸಾಮಾನ್ಯ ಮತದಾರರೊಂದಿಗೆ ಸಂಪರ್ಕವಿಲ್ಲ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿದೆ.
ಕಳೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ಸ್ ಪಕ್ಷವು 365 ಸ್ಥಾನ ಗೆದ್ದಿತ್ತು. ಆರ್ಥಿಕತೆ ಬಲ ಪಡಿಸುವುದು, ವರ್ಷಕ್ಕೆ ಸುಮಾರು 17 ಬಿಲಿಯನ್ ಪೌಂಡ್ಗಳಷ್ಟು ತೆರಿಗೆಗಳನ್ನು ಕಡಿತಗೊಳಿಸುವುದು. ಹಣದುಬ್ಬರಕ್ಕಿಂತ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಹೆಚ್ಚಿಸುವುದು ಮತ್ತು ರಕ್ಷಣಾ ವೆಚ್ಚವನ್ನು 2030ರ ವೇಳೆಗೆ ಜಿಡಿಪಿಯ ಶೇ.2.5ರಷ್ಟು ಹೆಚ್ಚಿಸುವುದು. ತೆರಿಗೆ ವಂಚನೆ ಮತ್ತು ಕಲ್ಯಾಣ ವೆಚ್ಚ ಕಡಿತಗೊಳಿಸುವ ಮೂಲಕ ಜನರಿಗೆ ಪಾವತಿಸಲಾಗುವುದು. ವಲಸಿಗರ ಸಂಖ್ಯೆ ಮಿತಿಗೊಳಿಸುವ ಬಗ್ಗೆ ಪಕ್ಷ ಭರವಸೆ ನೀಡಿತ್ತು.
ಕೀರ್ ಸ್ಟಾರ್ಮರ್ ಬಗ್ಗೆ ಹೆಚ್ಚಿನ ಒಲವು: ಪ್ರತಿಪಕ್ಷ ಲೇಬರ್ ಪಕ್ಷವನ್ನು 61 ವರ್ಷದ ಕೀರ್ ಸ್ಟಾರ್ಮರ್ ಮುನ್ನಡೆಸುತ್ತಿದ್ದಾರೆ. ವಕೀಲರಾಗಿರುವ ಇವರು, ಇಂಗ್ಲೆಂಡ್ ಮತ್ತು ವೇಲ್ಸ್‌ನ ಮಾಜಿ ಮುಖ್ಯ ಪ್ರಾಸಿಕ್ಯೂಟರ್. ಬ್ರಿಟನ್‌ನ ಮುಂದಿನ ನಾಯಕರಾಗುವ ಹಾದಿಯಲ್ಲಿ ಪ್ರಸ್ತುತ ನೆಚ್ಚಿನವರಾಗಿದ್ದಾರೆ. ಕೇಂದ್ರವಾದಿ ಮತ್ತು ವಾಸ್ತವಿಕವಾದಿ ಸ್ಟಾರ್ಮರ್ ತಮ್ಮನ್ನ ಪಕ್ಷವನ್ನು ಮಾಜಿ ನಾಯಕ ಜೆರೆಮಿ ಕಾರ್ಬಿನ್ ಅವರ ಸಮಾಜವಾದಿ ನೀತಿಗಳಿಂದ ದೂರವಿರಿಸಲು ಶ್ರಮಿಸಿದ್ದಾರೆ ಮತ್ತು ಪಕ್ಷದ ಆಂತರಿಕ ವಿಭಜನೆಗಳನ್ನು ತಗ್ಗಿಸಿದ್ದಾರೆ. ಆದರೆ, ಸ್ಟಾರ್ಮರ್ ಅವರನ್ನು ಅತ್ಯಾಕರ್ಷಕ ಮತ್ತು ಮಹತ್ವಾಕಾಂಕ್ಷೆಯಿಲ್ಲ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಲೇಬರ್ ಪಕ್ಷವು ಇವರ ನಾಯಕತ್ವದಲ್ಲಿ ಜನಪ್ರಿಯತೆಯನ್ನು ಗಳಿಸಿದೆ ಎಂಬುವುದು ನಿಜ.
ಕಳೆದ ಚುನಾವಣೆಯಲ್ಲಿ ಲೇಬರ್ ಪಕ್ಷವು 202 ಸ್ಥಾನಗಳನ್ನು ಪಡೆದಿತ್ತು. ಸಂಪತ್ತು ಸೃಷ್ಟಿಯ ಉತ್ತೇಜಿಸುವುದು, ಹೂಡಿಕೆ ಪ್ರೋತ್ಸಾಹಿಸುವುದು ಮತ್ತು 10 ವರ್ಷಗಳ ಮೂಲಸೌಕರ್ಯ ತಂತ್ರದ ಅಡಿ ರೈಲ್ವೆಗಳಂತಹ ಬ್ರಿಟನ್‌ನ ಮೂಲಸೌಕರ್ಯವನ್ನು ಸುಧಾರಿಸುವುದು. ಇಂಧನ ಭದ್ರತೆಯನ್ನು ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ಶುದ್ಧ ವಿದ್ಯುತ್ ಕಂಪನಿಯನ್ನು ಸ್ಥಾಪಿಸುವುದು, ತೈಲ ಮತ್ತು ಅನಿಲ ದೈತ್ಯರ ಮೇಲೆ ವಿಂಡ್‌ಫಾಲ್ ತೆರಿಗೆ. ಶಾಲೆಗಳಲ್ಲಿ ಸಾವಿರಾರು ಹೊಸ ಶಿಕ್ಷಕರಿಗೆ ವೇತನ ಪಾವತಿಸಲು ಖಾಸಗಿ ಶಾಲೆಗಳಿಗೆ ತೆರಿಗೆ ವಿಧಿಸುವ ಬಗ್ಗೆ ಆಶ್ವಾಸನೆ ನೀಡಿತ್ತು.
ಸ್ಕಾಟಿಷ್ ನ್ಯಾಷನಲ್ ಪಾರ್ಟಿ: ಕಳೆದ ಚುನಾವಣೆಯಲ್ಲಿ ಸ್ಕಾಟಿಷ್ ನ್ಯಾಷನಲ್ ಪಾರ್ಟಿಯು 48 ಸ್ಥಾನ ಗೆದ್ದು ಗಮನ ಸೆಳೆದಿತ್ತು. 2000ರಿಂದ 2004ರವರೆಗೆ ಪಕ್ಷವನ್ನು ಮುನ್ನಡೆಸಿದ್ದ 60 ವರ್ಷದ ಜಾನ್ ಸ್ವಿನ್ನಿ ಮೇ ತಿಂಗಳ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ತಮ್ಮ ಪಕ್ಷವು ಬಹುಪಾಲು ಸ್ಥಾನಗಳನ್ನು ಗೆದ್ದರೆ ಲಂಡನ್ ಮೂಲದ ಯುಕೆ ಸರ್ಕಾರದೊಂದಿಗೆ ಸ್ಕಾಟಿಷ್ ಸ್ವಾತಂತ್ರ್ಯ ಮಾತುಕತೆಗಳನ್ನು ತೆರೆಯಲು ಪ್ರಯತ್ನಿಸುವುದಾಗಿ ಸ್ವಿನ್ನಿ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ ಮತ್ತು ಯುರೋಪಿಯನ್ ಏಕ ಮಾರುಕಟ್ಟೆಗೆ ಪ್ರವೇಶ, ಸಾರ್ವಜನಿಕ ಆರೋಗ್ಯ ನಿಧಿ ಹೆಚ್ಚಳ, ಯುಕೆಯ ಸ್ಕಾಟ್ಲೆಂಡ್ ಮೂಲದ ಪರಮಾಣು ನಿರೋಧಕ ರದ್ದು ಮತ್ತು ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಗ್ರೀನ್ ಪಾರ್ಟಿ: ಕಾರ್ಲಾ ಡೆನಿಯರ್ ಮತ್ತು ಆಡ್ರಿಯನ್ ರಾಮ್ಸೆ ನಾಯಕತ್ವದ ಗ್ರೀನ್ ಪಾರ್ಟಿ ಮತ್ತೊಂದು ಪ್ರಮುಖ ಪಕ್ಷವಾಗಿದೆ. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಡೆನಿಯರ್ 2011ರಲ್ಲಿ ಪಕ್ಷ ಸೇರಿದ್ದಾರೆ. 38 ವರ್ಷದ ಡೆನಿಯರ್ 9 ವರ್ಷಗಳ ಕಾಲ ನೈಋತ್ಯ ಇಂಗ್ಲಿಷ್ ನಗರವಾದ ಬ್ರಿಸ್ಟಲ್‌ಗೆ ಸ್ಥಳೀಯ ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಆಡ್ರಿಯನ್ ರಾಮ್ಸೆ ಜೊತೆಗೆ ಸಹ-ನಾಯಕಿ ಆಯ್ಕೆಯಾಗಿದ್ದಾರೆ.
ಗ್ರೀನ್ ಪಕ್ಷವು ಪರಮಾಣು ಶಕ್ತಿಯನ್ನು ಸ್ಥಗಿತಗೊಳಿಸುವುದು. ವರ್ಷಕ್ಕೆ 40 ಬಿಲಿಯನ್ ಪೌಂಡ್‌ಗಳನ್ನು ಹಸಿರು ಆರ್ಥಿಕತೆಯಲ್ಲಿ ಹೂಡಿಕೆ, ಕಾರ್ಬನ್ ತೆರಿಗೆ, ಅತ್ಯಂತ ಶ್ರೀಮಂತರ ಮೇಲೆ ಹೊಸ ಸಂಪತ್ತು ತೆರಿಗೆ ಮತ್ತು ಲಕ್ಷಾಂತರ ಅಧಿಕ ಗಳಿಕೆದಾರರಿಗೆ ಆದಾಯ ತೆರಿಗೆ ಹೆಚ್ಚಳ ಮಾಡುವ ಭರವಸೆ ನೀಡಿದೆ.
ಇದನ್ನೂ ಓದಿ: ಇರಾನ್ ಅಧ್ಯಕ್ಷೀಯ ಚುನಾವಣೆಯಿಂದ ದೂರ ಸರಿಯುತ್ತಿರುವ ಮತದಾರರು: ಕಾರಣವೇನು ಗೊತ್ತಾ?