ಇರಾನ್:ಈ ವರ್ಷ ಮೇ 19 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ರಾಹಿಂ ರೈಸಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಿತು.
ಹಮಾಸ್- ಇಸ್ರೇಲ್ ಯುದ್ಧದಿಂದ ಮಧ್ಯಪ್ರಾಚ್ಯ ಹೊತ್ತಿ ಉರಿತ್ತಿರುವಾಗಲೇ, ಇರಾನ್ ಅಧ್ಯಕ್ಷರು ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಸಾವು ಕಂಡಿದ್ದರು. ಈ ಮಧ್ಯೆ ಇರಾನ್ ಕೂಡ ಪರಿಸ್ಥಿತಿ ಅರಿತುಕೊಂಡು ಅಧ್ಯಕ್ಷೀಯ ಚುನಾವಣೆ ನಡೆಸಿದೆ. ಇರಾನ್ ದೇಶದ ಅಧ್ಯಕ್ಷೀಯ ಚುನಾವಣೆಗೆ ಒಟ್ಟು ನಾಲ್ವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಪಾರ್ಲಿಮೆಂಟ್ನ ಸ್ಪೀಕರ್ ಮೊಹಮ್ಮದ್ ಬಾಘಿರ್ ಖಲೀಬಫ್, ಸಯೀದ್ ಜಲೀಲಿ ಹಾಗು ಶಿಯಾ ಧರ್ಮಗುರು ಮೊಸ್ತಫಾ ಪೋರ್ಮೊಹಮ್ಮದಿ ನಡವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಮೂವರು ನಾಯಕರ ಪೈಕಿ ಒಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.
ಇರಾನ್ನಲ್ಲಿ ಮತದಾನ ನಡೆದಿದ್ದು ಹೇಗೆ?: ಅಧ್ಯಕ್ಷೀಯ ಚುನಾವಣೆಯ ಮತದಾನ ಬಲು ಚರುಕಿನಿಂದ ನಡೆದಿದೆ. ನಿನ್ನೆ (ಶುಕ್ರವಾರ) ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ಟೆಹ್ರಾನ್ನ ಸೇರಿದಂತೆ ಶುಕ್ರವಾರದ ನಡೆದ ಚುನಾವಣೆಯಲ್ಲಿ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಇರಾನಿನವರು ಮತ ಚಲಾಯಿಸಿದರು. ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಮತದಾರರ ಉತ್ಸಾಹ ಕಡಿಮೆಯಿರುವುದು ಕಂಡು ಬಂದಿತ್ತು. ಕೆಲವು ಕಡೆಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
58,640 ಮತಗಟ್ಟೆಗಳಲ್ಲಿ ವೋಟಿಂಗ್: ದೇಶಾದ್ಯಂತ ಮಸೀದಿಗಳು ಮತ್ತು ಶಾಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 58,640 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಯಲ್ಲಿ ಮತ ಚಲಾಯಿಸಲು, ಮತದಾರರು ಮೊದಲು ಅರ್ಜಿಯನ್ನು ಭರ್ತಿ ಮಾಡಿ, ತಮ್ಮ ರಾಷ್ಟ್ರೀಯ ಗುರುತಿನ ಚೀಟಿಯನ್ನು ಪ್ರಸ್ತುತಪಡಿಸಬೇಕು. ನಂತರ ಅಭ್ಯರ್ಥಿಯ ಹೆಸರು ಮತ್ತು ಕೋಡ್ ಅನ್ನು ಯಾರಿಗೂ ಕಾಣದಂತೆ ಪೇಪರ್ನಲ್ಲಿ ಬರೆಯುತ್ತಾರೆ. ನಂತರ ಅದನ್ನು ಮತ ಪೆಟ್ಟಿಗೆಯಲ್ಲಿ ಹಾಕುತ್ತಾರೆ.