ಇಸ್ಲಾಮಾಬಾದ್: ಇರಾನ್ನ ವಿದೇಶಾಂಗ ಸಚಿವ ಹುಸೇನ್ ಅಮೀರ್ - ಅಬ್ದೊಲ್ಲಾಹಿಯಾನ್ ಸೋಮವಾರ ಇಸ್ಲಾಮಾಬಾದ್ಗೆ ಆಗಮಿಸಿದ್ದಾರೆ. ಪಾಕಿಸ್ತಾನದ ಹಂಗಾಮಿ ವಿದೇಶಾಂಗ ವ್ಯವಹಾರಗಳ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಅವರು ಹುಸೇನ್ ಅಮೀರ್ - ಅಬ್ದೊಲ್ಲಾಹಿಯಾನ್ ಅವರನ್ನು ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಸ್ವಾಗತಿಸಿದರು. ಎರಡೂ ದೇಶಗಳು ಪರಸ್ಪರರ ವಿರುದ್ಧ ಕ್ಷಿಪಣಿ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ಮಹತ್ವ ಪಡೆದು ಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ವಿದೇಶಾಂಗ ಸಚಿವ ಜಲೀಲ್ ಜಿಲಾನಿ ಅವರು ಇರಾನ್ ವಿದೇಶಾಂಗ ಸಚಿವ ಅಮೀರ್ - ಅಬ್ದೊಲ್ಲಾಹಿಯಾನ್ ಅವರನ್ನು ವಿದೇಶಾಂಗ ಸಚಿವಾಲಯದಲ್ಲಿ ಸ್ವಾಗತಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಪಾಕಿಸ್ತಾನ - ಇರಾನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಉಭಯ ವಿದೇಶಾಂಗ ಸಚಿವರು ಸಮಗ್ರ ಮಾತುಕತೆ ನಡೆಸಲಿದ್ದಾರೆ" ಎಂದು ಬರೆದಿದೆ.
"ವಿದೇಶಾಂಗ ಸಚಿವ ಜಲೀಲ್ ಜಿಲಾನಿ ಅವರ ಆಹ್ವಾನದ ಮೇರೆಗೆ ಇರಾನ್ ವಿದೇಶಾಂಗ ಸಚಿವ ಅಮೀರ್ - ಅಬ್ದೊಲ್ಲಾಹಿಯಾನ್ ಇಸ್ಲಾಮಾಬಾದ್ ಗೆ ಆಗಮಿಸಿದ್ದಾರೆ. ನೂರ್ ಖಾನ್ ವಾಯುನೆಲೆಯಲ್ಲಿ ಅವರನ್ನು ಹೆಚ್ಚುವರಿ ವಿದೇಶಾಂಗ ಕಾರ್ಯದರ್ಶಿ (ಅಫ್ಘಾನಿಸ್ತಾನ ಮತ್ತು ಪಶ್ಚಿಮ ಏಷ್ಯಾ) ರಹೀಮ್ ಹಯಾತ್ ಅವರು ಸ್ವಾಗತಿಸಿದರು" ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.