ಕರ್ನಾಟಕ

karnataka

ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ: ನಾಲ್ವರು ಸೈನಿಕರು ಸಾವು, ಮೂವರಿಗೆ ಗಾಯ - IED Blast

By PTI

Published : Jun 1, 2024, 1:31 PM IST

ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ ಸಂಭವಿಸಿ ಗಸ್ತಿನಲ್ಲಿದ್ದ 4 ಜನ ಸೈನಿಕರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ
ಪಾಕಿಸ್ತಾನದಲ್ಲಿ ಐಇಡಿ ಸ್ಫೋಟ (ಸಾಂದರ್ಭಿಕ ಚಿತ್ರ ETV Bharat)

ಪೇಶಾವರ: ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ನಡೆದ ಐಇಡಿ ಸ್ಫೋಟದಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಸ್ಥಳೀಯ ಸುದ್ದಿ ಸಂಸ್ಥೆಗಳ ಪ್ರಕಾರ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ರಾ ಬಾಂಗ್ಲಾ ಮತ್ತು ತರ್ಖಾನನ್ ಎಂಬ ಪ್ರದೇಶದಲ್ಲಿ ಶುಕ್ರವಾರ ಸಂಜೆ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ನಾಲ್ವರು ಪಾಕಿಸ್ತಾನಿ ಸೇನಾ ಯೋಧರು ಅಸುನೀಗಿದ್ದರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜತೆಗಿದ್ದ ಇತರೆ ಸೈನಿಕರು ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮೃತ ಸೈನಿಕರನ್ನು ಜುಬೈರ್, ಇಜಾಜ್, ಫೈಸಲ್ ಮತ್ತು ಆಸಿಫ್ ಎಂದು ಗುರುತಿಸಲಾಗಿದ್ದು, ಖಾದಿರ್, ನಜೀಬ್ ಮತ್ತು ರೆಹಮಾನ್ ಗಾಯಾಳು ಸೈನಿಕರು ಎಂದು ಪತ್ತೆ ಹಚ್ಚಲಾಗಿದೆ.

ಕಳೆದ ತಿಂಗಳು ಮೇ 9, 2024 ರಂದು ನೈಋತ್ಯ ಪಾಕಿಸ್ತಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮಲಗಿದ್ದ ಏಳು ಜನರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದರು. ಒಂದು ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಭಯೋತ್ಪಾದನೆಯ ಎರಡನೇ ಪ್ರಮುಖ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಘಟನೆಯಲ್ಲಿನ ಮೃತಪಟ್ಟವರೆಲ್ಲ ಮಧ್ಯ ಪಂಜಾಬ್​ ಪ್ರಾಂತ್ಯದವರಾಗಿದ್ದು, ಕ್ಷೌರಿಕ ಅಂಗಡಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ಪಾಕಿಸ್ತಾನ: ನಿದ್ರೆಯಲ್ಲಿದ್ದ 7 ಜನರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರು - Pak Terror Attack

ABOUT THE AUTHOR

...view details