ಟೆಲ್ ಅವೀವ್, ಇಸ್ರೇಲ್: ಬುಧವಾರ ಬೆಳಗ್ಗೆ ಟೆಹ್ರಾನ್ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಇರಾನ್ ನಡೆಸಬಹುದಾದ ಸಂಭಾವ್ಯ ದಾಳಿಯನ್ನು ಎದುರಿಸಲು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸಜ್ಜಾಗಿವೆ. ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುವುದಾಗಿ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ, ಐಡಿಎಫ್ ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವರ ಕಚೇರಿಯ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಇಸ್ರೇಲ್ನ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಇರಾನ್ ತನ್ನ ಛಾಯಾ ಸಂಘಟನೆಗಳಾದ ಹಮಾಸ್ ಮತ್ತು ಹಿಜ್ಬುಲ್ಲಾ ಹಾಗೂ ಸಮುದ್ರದಲ್ಲಿ ಹೌತಿಗಳನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿಗಳನ್ನು ತೀವ್ರಗೊಳಿಸುವ ಸಾಧ್ಯತೆಯಿದೆ.
ಇರಾನ್ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಟೆಹ್ರಾನ್ಗೆ ಬಂದಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹಲವಾರು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಉಭಯಕುಶಲೋಪರಿ ನಡೆಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಹನಿಯೆಹ್ ಹತ್ಯೆಯಾಗಿರುವುದು ಇರಾನ್ಗೆ ಭಾರಿ ಆಘಾತವನ್ನುಂಟು ಮಾಡಿದೆ. ಅಲ್ಲದೇ ಹನಿಯೆಹ್ ಅವರು ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಮಂಗಳವಾರ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರೊಂದಿಗೆ ಕೂಡ ಮುಖಾಮುಖಿ ಸಭೆ ನಡೆಸಿದ್ದರು.
ಖಮೇನಿ ಅವರ ಬಹಿರಂಗ ಬೆದರಿಕೆಯ ಹಿನ್ನೆಲೆಯಲ್ಲಿ ಇಸ್ರೇಲ್ ಭದ್ರತಾ ಮಂಡಳಿಯು ಬುಧವಾರ ತನ್ನ ತುರ್ತು ಸಭೆಯಲ್ಲಿ ಟೆಲ್ ಅವೀವ್ ಮತ್ತು ಹೈಫಾದಲ್ಲಿನ ತನ್ನ ಮಿಲಿಟರಿ ನೆಲೆಯನ್ನು ಬಲಪಡಿಸಲು ಆದೇಶಿಸಿದೆ.