ಕೀವ್(ಉಕ್ರೇನ್):ತಮ್ಮನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ತಿರುಗೇಟು ನೀಡಿದ್ದಾರೆ. "ನಾನು ಶಾಶ್ವತವಾಗಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಬಯಸುವುದಿಲ್ಲ. 'ನ್ಯಾಟೋ'(NATO)ದಲ್ಲಿ ಉಕ್ರೇನ್‌ಗೆ ಸ್ಥಾನ ನೀಡಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ" ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಮೂರನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಝೆಲೆನ್ಸ್ಕಿ, "ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ತಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ದಶಕಗಳ ಕಾಲ ಅಧಿಕಾರಕ್ಕೆ ಅಂಟಿಕೊಂಡು ಉಳಿಯಲು ನಾನು ಬಯಸುವುದಿಲ್ಲ" ಎಂದರು.
"ನನಗೆ ಅಧಿಕಾರವಲ್ಲ, ಉಕ್ರೇನ್ನ ಭದ್ರತೆ ಪ್ರಮುಖ ವಿಷಯ. ಮೊದಲು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ. ದೇಶದಲ್ಲಿ ಶಾಂತಿ ಮರಳಿದರೆ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಇದರ ಬದಲಿಗೆ, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡಬೇಕು" ಎಂದು ಅವರು ಬೇಡಿಕೆ ಇಟ್ಟರು.
"ಯುದ್ಧ ಕೊನೆಗೊಳ್ಳಲು ಅಮೆರಿಕ ಮಧ್ಯಸ್ಥಿಕೆ ವಹಿಸಲಿ. ಆದರೆ, ಉಕ್ರೇನಿಯನ್ ನಾಗರಿಕರಿಗೆ ನಷ್ಟ ಉಂಟುಮಾಡುವ ಭದ್ರತಾ ಒಪ್ಪಂದವನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಜೊತೆ ಖನಿಜ ಒಪ್ಪಂದ:"ಉಕ್ರೇನ್‌ಗೆ ಅಮೆರಿಕ ಮಿಲಿಟರಿ ಸಹಾಯ ಮಾಡಿದೆ. ಅದು ಈವರೆಗೂ ಕೊಟ್ಟಿದ್ದು ಸಾಲವಲ್ಲ, ಅನುದಾನ. ಇದಕ್ಕೆ ಪ್ರತಿಯಾಗಿ ನಮ್ಮ ದೇಶದಲ್ಲಿ ಖನಿಜ ಸಂಪತ್ತನ್ನು ಯಾಚಿಸುತ್ತಿದೆ. ಯುದ್ಧ ನಿಲುಗಡೆ ಬಳಿಕ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳೋಣ. ಅದಕ್ಕೂ ತುರ್ತಾಗಿ ಮೊದಲು ಯುದ್ಧ ಕೊನೆಗಾಣಬೇಕು" ಎಂದು ಅವರು ತಿಳಿಸಿದ್ದಾರೆ.