ಹೈದರಾಬಾದ್: ಭಾರತೀಯ ಮೂಲದ 23 ವರ್ಷದ ತೆಲುಗು ವಿದ್ಯಾರ್ಥಿನಿಯೊಬ್ಬರು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಮತ್ತು ಸ್ಯಾನ್ ಬರ್ನಾರ್ಡಿನೊದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವ ನಿತಿಶಾ ಕಂದುಲಾ ಮೇ 28 ರಿಂದ ನಾಪತ್ತೆಯಾಗಿದ್ದಾರೆ. ನಿತೀಶಾ ಅವರು ಕೊನೆಯ ಬಾರಿಗೆ ಲಾಸ್ ಏಂಜಲೀಸ್ನಲ್ಲಿ ಕಾಣಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ವಿದ್ಯಾರ್ಥಿನಿಯ ಪತ್ತೆಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ.
ಕಂದುಲಾ 5 ಅಡಿ 6 ಇಂಚು ಎತ್ತರ ಇದ್ದು, ಕಪ್ಪು ಕೂದಲು ಮತ್ತು ಕಪ್ಪು ಕಣ್ಣುಗಳನ್ನು ಹೊಂದಿದ್ದು, ಸುಮಾರು 160 ಪೌಂಡ್ (72.5 ಕೆಜಿ) ತೂಕ ಹೊಂದಿದ್ದಾರೆ ಎಂದು ಪೊಲೀಸರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಲೈಸೆನ್ಸ್ ಪ್ಲೇಟ್ ಹೊಂದಿರುವ 2021 ರ ಟೊಯೊಟಾ ಕರೊಲಾವನ್ನು ಅವರು ಓಡಿಸುತ್ತಿದ್ದರು, ಆದರೆ, ಅದರ ಬಣ್ಣ ತಿಳಿದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಒಂದು ತಿಂಗಳೊಳಗೆ ಇಂಥ ಮತ್ತೊಂದು ಘಟನೆ ನಡೆದಿರುವುದು ಕಳವಳ ಮೂಡಿಸಿದೆ. ತೆಲಂಗಾಣ ಮೂಲದ ರೂಪೇಶ್ ಚಂದ್ರ ಚಿಂತಾಕಿಂಡಿ ಕಳೆದ ತಿಂಗಳು ಚಿಕಾಗೋದಲ್ಲಿ ನಾಪತ್ತೆಯಾಗಿದ್ದರು. ಈ ವಿದ್ಯಾರ್ಥಿ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರಕಿಲ್ಲ.