ಲೆಬನಾನ್:ಇಸ್ರೇಲ್ ವಿರುದ್ಧ ಸಂಘರ್ಷ ನಡೆಸುತ್ತಿರುವ ಲೆಬನಾನ್ನ ಹಿಜ್ಬುಲ್ಲಾ ಸಂಘಟನೆಗೆ ನೈಮ್ ಕಾಸ್ಸೆಮ್ ಹೊಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಬೈರುತ್ನಲ್ಲಿ ಇಸ್ರೇಲ್ ದಾಳಿಗೆ ಸಂಘಟನೆಯ ಉನ್ನತ ನಾಯಕನಾಗಿದ್ದ ಹಸನ್ ನಸ್ರಲ್ಲಾ ಸಾವನ್ನಪ್ಪಿದ ತಿಂಗಳ ಬಳಿಕ ಉತ್ತರಾಧಿಕಾರಿಯಾಗಿ ಬಂದಿದ್ದಾರೆ.
ಹಿಜ್ಬುಲ್ಲಾವನ್ನು ನಿಯಂತ್ರಿಸುವ ಶೂರಾ ಸಮಿತಿಯು ಸಂಘಟನೆಯ ಉಪ ಮುಖ್ಯಸ್ಥರಾಗಿದ್ದ ನೈಮ್ ಕಾಸ್ಸೆಮ್ರನ್ನು ಉನ್ನತ ನಾಯಕನನ್ನಾಗಿ ಆಯ್ಕೆ ಮಾಡಿ ಮಂಗಳವಾರ ಪ್ರಕಟಿಸಿದೆ. "ನೈಮ್ ಕಾಸ್ಸೆಮ್ರನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಒಪ್ಪಿಕೊಂಡಿದೆ. ಇವರ ನೇತೃತ್ವದಲ್ಲಿ ಸಂಘಟನೆಯು ಮುಂದುವರಿಯಬೇಕಿದೆ" ಎಂದು ಇರಾನ್ ಬೆಂಬಲಿತ ಬಂಡುಕೋರರ ಗುಂಪು ಹೇಳಿಕೊಂಡಿದೆ.
ಹಿಜ್ಬುಲ್ಲಾದ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥನಾಗಿದ್ದ ಹಶೆಮ್ ಸಫಿದ್ದೀನ್ ಸಂಘಟನೆಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆ ಇತ್ತು. ಆದರೆ, ಹಸನ್ ನಸ್ರಲ್ಲಾ ಹತ್ಯೆಯಾದ ಕೆಲವೇ ದಿನಗಳ ಅಂತರದಲ್ಲಿ ಈತನನ್ನೂ ಇಸ್ರೇಲ್ ದಾಳಿ ಮಾಡಿ ಹತ್ಯೆ ಮಾಡಿತ್ತು. ಹೀಗಾಗಿ, ಒಂದು ತಿಂಗಳಿಂದ ಸಂಘಟನೆಯ ಚುಕ್ಕಾಣಿ ಖಾಲಿ ಇತ್ತು.
71 ವರ್ಷದ ನೈಮ್ ಕಾಸ್ಸೆಮ್ 1982ರಲ್ಲಿ ಹಿಜ್ಬುಲ್ಲಾ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಮೃತ ಹಸನ್ ನಸ್ರಲ್ಲಾ ಮುಖ್ಯಸ್ಥನಾದ ಬಳಿಕ, ಈತ 1991ರಿಂದ ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ.