ಬಾರಿ (ಇಟಲಿ): ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಷಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 'ಮೆಲೋಡಿ (#Melodi)' ಶೀರ್ಷಿಕೆಯ ಫೋಟೋ ಆ ಸಮಯದಲ್ಲಿ ವೈರಲ್ ಆಗಿತ್ತು. ಈಗ ಮತ್ತೆ ಇಬ್ಬರೂ ಸೆಲ್ಫಿ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ‘ಮೆಲೋಡಿ’ ಕ್ಷಣ ಮತ್ತೆ ಟ್ರೆಂಡಿಂಗ್ ಆಗ್ತಿದೆ.
ಜಿ7 ಶೃಂಗಸಭೆ ಇಟಲಿಯ ಅಪುಲಿಯಾದಲ್ಲಿ ನಡೆಯಿತು. ಇಟಲಿ ಪ್ರಧಾನಿ ಮೆಲೋನಿ ಅವರು ಪ್ರಧಾನಿ ಮೋದಿಗೆ ‘ನಮಸ್ತೆ’ ಮೂಲಕ ಶುಭಾಶಯ ಕೋರಿದರು. ಸ್ವಲ್ಪ ಸಮಯದವರೆಗೆ ಅವರು ಮಾತುಕತೆ ನಡೆಸಿದರು. ಸಭೆಯ ನಂತರ ಮೆಲೊನಿ ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದೀಗ ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದರೊಂದಿಗೆ ಮೆಲೋನಿ ಈ ಸೆಲ್ಫಿ ವಿಡಿಯೋವನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು 'ಹಾಯ್ ಫ್ರೆಂಡ್ಸ್ ಫ್ರಂ ಮೆಲೋಡಿ' ಎಂದು ಶೀರ್ಷಿಕೆ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದುಬೈ ವೇದಿಕೆಯಲ್ಲಿ ನಡೆದ 'ಕಾಪ್ 28' ಸಮ್ಮೇಳನದ ವೇಳೆ ಅವರಿಬ್ಬರ ಸೆಲ್ಫಿ ವೈರಲ್ ಆಗಿದ್ದು ಗೊತ್ತೇ ಇದೆ. X ನಲ್ಲಿ ಮೋದಿ ಜೊತೆಗಿನ ಸೆಲ್ಫಿಯನ್ನು ಮೆಲೋನಿ ಹಂಚಿಕೊಂಡಿದ್ದರು. ಅದಕ್ಕೆ ಹ್ಯಾಷ್‌ಟ್ಯಾಗ್ ಮೆಲೋಡಿ ಎಂದು ಬರೆಯಲಾಗಿತ್ತು. ಅಂದಿನಿಂದ ಈ #Melodi ಪದ ಟ್ರೆಂಡ್ ಆಗಿದೆ. ಇದೇ ವೇಳೆ ಪ್ರಧಾನಿ ಮೋದಿ ಕೂಡ ಆ ದಿನದ ಫೋಟೋಗೆ ಪ್ರತಿಕ್ರಿಯೆ ನೀಡಿದ್ದರು. ಸ್ನೇಹಿತರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷವಾಗಿರುತ್ತದೆ ಎಂದು ಅವರು ಉತ್ತರಿಸಿದರು.