ಕರ್ನಾಟಕ

karnataka

ETV Bharat / international

ಇಸ್ರೇಲ್ ದಾಳಿಗೆ ಹಮಾಸ್ ಮುಖಂಡನ ಮೂವರು ಮಕ್ಕಳು, ಮೊಮ್ಮಕ್ಕಳ ಸಾವು - Israeli air strike

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ಮುಖಂಡನ ಮಕ್ಕಳು, ಮೊಮ್ಮಕ್ಕಳು ಸಾವನ್ನಪ್ಪಿದ್ದಾರೆ.

Hamas leader Ismail Haniyeh's sons, grandchildren killed in Israeli strike
ಇಸ್ರೇಲ್ ದಾಳಿಗೆ ಹಮಾಸ್ ಮುಖಂಡನ ಮೂವರು ಮಕ್ಕಳು, ಮೊಮ್ಮಕ್ಕಳು ಸಾವು

By ETV Bharat Karnataka Team

Published : Apr 11, 2024, 7:02 AM IST

ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್ ವಾಯುಪಡೆ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ಮುಖಂಡ ಇಸ್ಮಾಯಿಲ್ ಹನಿಯೆಹ್ ( Ismail Haniyeh) ಅವರ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಾಹಿತಿ ನೀಡಿದೆ.

ಹಮಾಸ್ ನಾಯಕನ ಮೂವರು ಪುತ್ರರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಪಡೆಗಳು ದೃಢಪಡಿಸಿವೆ. ಮೃತರನ್ನು ಹಮಾಸ್ ಮಿಲಿಟರಿಯ ಸೆಲ್ ಕಮಾಂಡರ್ ಅಮೀರ್ ಹನಿಯೆಹ್, ಮೊಹಮ್ಮದ್ ಮತ್ತು ಹಝಿಮ್ ಹನಿಯೆಹ್ ಎಂದು ಗುರುತಿಸಲಾಗಿದೆ.

"ಐಎಎಫ್ ವಿಮಾನದ ದಾಳಿಗೆ ಸೆಂಟ್ರಲ್ ಗಾಜಾದಲ್ಲಿ ಹಮಾಸ್ ಮಿಲಿಟರಿ ವಿಭಾಗದ ಸೆಲ್ ಕಮಾಂಡರ್ ಅಮೀರ್ ಹನಿಯೆಹ್, ಹಮಾಸ್ ಮಿಲಿಟರಿ ಕಾರ್ಯಕರ್ತರಾದ ಮೊಹಮ್ಮದ್ ಮತ್ತು ಹಝೀಮ್​​ ಹನಿಯೆಹ್ ಅವರು ಮೃತಪಟ್ಟಿದ್ದಾರೆ. ಈ ಮೂವರು ಕಾರ್ಯಕರ್ತರು ಹಮಾಸ್ ರಾಜಕೀಯ ಅಧ್ಯಕ್ಷ ಇಸ್ಮಾಯಿಲ್ ಹನಿಯೆಹ್ ಅವರ ಪುತ್ರರು'' ಎಂದು ಇಸ್ರೇಲ್ ರಕ್ಷಣಾ ಪಡೆ ಖಚಿತಪಡಿಸಿದೆ. ಐಡಿಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಹಂಚಿಕೊಂಡಿದೆ.

ಅಲ್ಲದೇ, ರಂಜಾನ್ ಮೊದಲ ದಿನ ಶಾತಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಹನಿಯೆಹ್ ಅವರ ನಾಲ್ವರು ಮೊಮ್ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಇಸ್ರೇಲಿ ಸೇನೆ ನಮ್ಮ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡರೂ ಪ್ಯಾಲೆಸ್ತೀನ್ ನಾಯಕರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹತ್ಯೆಗಳು ಪರಿಣಾಮ ಬೀರುವುದಿಲ್ಲ ಎಂದು ಹನಿಯೆಹ್ ಅಲ್ ಜಝೀರಾಗೆ ತಿಳಿಸಿದ್ದಾರೆ.

ಅಲ್ ಜಝೀರಾ ಅರೇಬಿಕ್‌ಗೆ ನೀಡಿದ ಸಂದರ್ಶನದಲ್ಲಿ, ಹನಿಯೆಹ್ ತಮ್ಮ ಮಕ್ಕಳಾದ ಹಝಿಮ್, ಅಮೀರ್, ಮೊಹಮ್ಮದ್ ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡಿರುವುದಾಗಿ ದೃಢಪಡಿಸಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕನ ಮೊಮ್ಮಕ್ಕಳು ಸಹ ಸಾವನ್ನಪ್ಪಿದ್ದಾರೆ ಎಂದು ಶೆಹಾಬ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.

ಇದನ್ನೂ ಓದಿ:ಕೆನಡಾ ಚುನಾವಣೆಗಳಲ್ಲಿ ಚೀನಾ ರಾಜಕೀಯ ಹಸ್ತಕ್ಷೇಪ: ಗುಪ್ತಚರ ಸಂಸ್ಥೆ ಆರೋಪ - Canada Election

"ಹುತಾತ್ಮರ ರಕ್ತ ಮತ್ತು ಗಾಯಗೊಂಡವರ ನೋವಿನ ಮೂಲಕ, ನಾವು ಭರವಸೆಯನ್ನು ಸೃಷ್ಟಿಸುತ್ತೇವೆ, ಭವಿಷ್ಯವನ್ನು ರಚಿಸುತ್ತೇವೆ, ನಮ್ಮ ಜನರಿಗೆ ಮತ್ತು ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಸೃಷ್ಟಿಸುತ್ತೇವೆ" ಎಂದು ಹನಿಯೆಹ್ ತಿಳಿಸಿದರು. ಯುದ್ಧ ಆರಂಭ ಆದಾಗಿನಿಂದ ಹಿಡಿದು ತಮ್ಮ ಕುಟುಂಬದ ಸುಮಾರು 60 ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನು ಕೂಡ ಅವರು ಇದೇ ವೇಳೆ ದೃಢಪಡಿಸಿದ್ದಾರೆ.

ಇದನ್ನೂ ಓದಿ:40 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ನಕಾರ: ಕದನ ವಿರಾಮ ಮಾತುಕತೆ ಮತ್ತೆ ವಿಫಲ - Israel Hamas war

"ಈ ಕ್ರಿಮಿನಲ್ ಶತ್ರುಗಳು ಪ್ರತೀಕಾರ ಮತ್ತು ಕೊಲೆ, ರಕ್ತಪಾತದಂತಹ ಮನೋಭಾವದಿಂದ ವರ್ತಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಯಾವುದೇ ಮಾನದಂಡ ಅಥವಾ ಕಾನೂನುಗಳನ್ನು ಗಮನಿಸುವುದಿಲ್ಲ" ಎಂದು ಹನಿಯೆಹ್ ಆಕ್ರೋಶ ಹೊರಹಾಕಿದ್ದಾರೆ.

ಗಾಜಾ ಮೇಲೆ ಇಸ್ರೇಲ್​ ನಡೆಸಿದ ದಾಳಿ ವೇಳೆ ಇದುವರೆಗೂ 33,482 ಮಂದಿ ಅಸುನೀಗಿದ್ದಾರೆ ಎಂದು ಅಲ್ಲಿನ ಸಚಿವಾಲಯ ಸ್ಪಷ್ಟಪಡಿಸಿದೆ. ಕಳೆದ ಆರು ತಿಂಗಳಿಂದ ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸುತ್ತಿದೆ.

ABOUT THE AUTHOR

...view details