ಟೆಲ್ ಅವೀವ್ : ಕದನ ವಿರಾಮ ಮಾತುಕತೆಯಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು, ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಹಿರಿಯ ನಾಯಕರ ನಿಯೋಗವು ಮಧ್ಯಸ್ಥಿಕೆ ಮಾತುಕತೆಗಾಗಿ ಈ ವಾರ ಕೈರೋಗೆ ಭೇಟಿ ನೀಡಲಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ವಿಶೇಷ ರಾಯಭಾರಿ ಬ್ರೆಟ್ ಮೆಕ್ ಗುರ್ಕ್ ಈ ವಾರ ಕೈರೋಗೆ ಆಗಮಿಸಲಿದ್ದು, ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಮೂಲಗಳ ಪ್ರಕಾರ, ಇಸ್ರೇಲಿ ಜೈಲುಗಳಲ್ಲಿನ ಪ್ಯಾಲೆಸ್ಟೈನ್ ಕೈದಿಗಳಿಗೆ ಪ್ರತಿಯಾಗಿ ತನ್ನ ವಶದಲ್ಲಿರುವ ಮಹಿಳೆಯರು, ವೃದ್ಧರು ಮತ್ತು ಗಾಯಗೊಂಡ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಾಯಕತ್ವ ಒಪ್ಪಿಕೊಂಡಿದೆ. ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಲ್-ಥಾನಿ ಮತ್ತು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಅಬ್ಬಾಸ್ ಕಾಮೆಲ್ ಕೂಡ ಕೈರೋದಲ್ಲಿ ನಡೆಯಲಿರುವ ಮಧ್ಯಸ್ಥಿಕೆ ಮಾತುಕತೆಯ ಭಾಗವಾಗಲಿದ್ದಾರೆ.
ಆದಾಗ್ಯೂ ಕದನ ವಿರಾಮ ಮಾತುಕತೆಗಳು ಯಾವ ದಿನ ನಡೆಯಲಿವೆ ಎಂಬ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲವು ನಿಖರವಾದ ಮಾಹಿತಿ ನೀಡಿಲ್ಲ. ಒಟ್ಟಾರೆ ಈ ವಾರವೇ ಮಾತುಕತೆ ನಡೆಯಲಿವೆ ಎಂದು ಅದು ಬಹಿರಂಗಪಡಿಸಿದೆ.