ಸಿಯೋಲ್(ದಕ್ಷಿಣ ಕೊರಿಯಾ): ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಗಡಿಗೆ ಕಸ ತುಂಬಿರುವ 600 ಬಲೂನ್ಗಳನ್ನು ಹಾರಿ ಬಿಟ್ಟಿದೆ ಎಂದು ಸಿಯೋಲ್ನ ಮಿಲಿಟರಿ ಭಾನುವಾರ ತಿಳಿಸಿದೆ. ಸಿಗರೇಟ್ ತುಂಡುಗಳಿಂದ ಹಿಡಿದು ಪ್ಲಾಸ್ಟಿಕ್ವರೆಗೆ ಕಸ ಕಡ್ಡಿಗಳನ್ನು ಈ ಬಲೂನ್ಗಳಲ್ಲಿ ತುಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಇಂಥ ಎರಡನೇ ಘಟನೆಯಾಗಿದೆ.
"ಜೂನ್ 1ರ ರಾತ್ರಿ 8 ಗಂಟೆಯಿಂದ (1100 ಜಿಎಂಟಿ) ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ಕಡೆಗೆ ತ್ಯಾಜ್ಯ ಬಲೂನ್ ಹಾರಿಸುವುದನ್ನು ಪುನರಾರಂಭಿಸಿದೆ" ಎಂದು ಸಿಯೋಲ್ನ ಜಂಟಿ ಮಿಲಿಟರಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೂನ್ 2ರಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ, ಸರಿಸುಮಾರು 600 ಬಲೂನ್ಗಳು ಗಡಿಯ ಒಳಗೆ ಬಂದಿವೆ. ಪ್ರತೀ ಗಂಟೆಗೆ ಸುಮಾರು 20ರಿಂದ 50 ಬಲೂನ್ಗಳು ಗಾಳಿಯ ಮೂಲಕ ಗಡಿಯೊಳಗೆ ಬರುತ್ತಿವೆ ಎಂದು ಅದು ಹೇಳಿದೆ.
ರಾಜಧಾನಿ ಸಿಯೋಲ್ ಮತ್ತು ಪಕ್ಕದ ಪ್ರದೇಶವಾದ ಗೆಯಾಂಗ್ಜಿ ಸೇರಿದಂತೆ ದಕ್ಷಿಣ ಕೊರಿಯಾದ ಉತ್ತರ ಪ್ರಾಂತ್ಯಗಳಲ್ಲಿ ಬಲೂನ್ಗಳು ಇಳಿಯುತ್ತಿವೆ. ಈ ಪ್ರದೇಶವು ಒಟ್ಟಾರೆಯಾಗಿ ದಕ್ಷಿಣ ಕೊರಿಯಾದ ಅರ್ಧದಷ್ಟು ಜನಸಂಖ್ಯೆಗೆ ನೆಲೆಯಾಗಿದೆ.
"ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಕಸದ ಚೀಲಗಳನ್ನು ಹೊತ್ತ ನೂರಾರು ಬಲೂನ್ಗಳನ್ನು ಕಳುಹಿಸಲಾರಂಭಿಸಿರುವುದು ಅತ್ಯಂತ ಕೆಳಮಟ್ಟದ ವರ್ತನೆಯಾಗಿದೆ. ಇಂಥ ಹುಚ್ಚು ಪ್ರಚೋದನೆಗಳನ್ನು ನಿಲ್ಲಿಸದಿದ್ದರೆ ತಕ್ಕ ಪ್ರತೀಕಾರ ಎದುರಿಸಬೇಕಾಗುತ್ತದೆ" ಎಂದು ಸಿಯೋಲ್ ಎಚ್ಚರಿಕೆ ನೀಡಿದೆ.