ಲಕ್ನೋ (ಉತ್ತರ ಪ್ರದೇಶ): ಹೊಸ ವರ್ಷದ ದಿನವೇ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದ್ದು, ಯುವಕನೋರ್ವ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಲಕ್ನೋದಲ್ಲಿ ವರದಿಯಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದ ನಾಕಾ ಪ್ರದೇಶದಲ್ಲಿನ ಹೋಟೆಲ್ ಶರಂಜೀತ್ನಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎಂದು ಲಕ್ನೋ ಸೆಂಟ್ರಲ್ ಡಿಸಿಪಿ ರವೀನಾ ತ್ಯಾಗಿ ತಿಳಿಸಿದ್ದಾರೆ.
ಕೊಲೆ ಮಾಡಿದ ಆರೋಪಿಯನ್ನು 24 ವರ್ಷದ ಅರ್ಶದ್ ಎಂದು ಗುರುತಿಸಲಾಗಿದೆ. ಕೊಲೆಗೀಡಾದ ನಾಲ್ವರು ಸಹೋದರಿಯರು 9 ವರ್ಷದ ಬಾಲಕಿ, 19 ವರ್ಷದ ಅಲ್ಶಿಯಾ, 18 ವರ್ಷದ ಅಕ್ಸಾ, ಮತ್ತು 18 ವರ್ಷದ ರಹ್ಮೀನ್ ಆಗಿದ್ದು, ತಾಯಿ ಅಸ್ಮಾ ಕೂಡ ಸಾವನ್ನಪ್ಪಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಅರ್ಶದ್ ಮೊದಲಿಗೆ ಮಲಗಿದ್ದ ತಾಯಿಯನ್ನು ಬ್ಲೇಡ್ ಸಹಾಯದಿಂದ ಹತ್ಯೆ ಮಾಡಿದ್ದು, ಬಳಿಕ ನಿದ್ರೆಗೆ ಜಾರಿದ್ದ ಸಹೋದರಿಯರನ್ನು ಕೊಲೆಗೈದಿದ್ದಾನೆ. ಇವರೆಲ್ಲರೂ ಹೊಸ ವರ್ಷದ ಸಂಭ್ರಮಾಚರಣೆಗೆ ಲಕ್ನೋಗೆ ಬಂದಿದ್ದರು. ಸಂಭ್ರಮಾಚರಣೆ ಬಳಿಕ ಹೋಟೆಲ್ಗೆ ತೆರಳಿ ಮಲಗಿದ್ದಾಗ ಅರ್ಶದ್ ಈ ಕೃತ್ಯ ಎಸಗಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆ ಆಗ್ರಾ ಮೂಲದ ಅರ್ಶದ್ ಈ ಘೋರ ಕೃತ್ಯ ನಡೆಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಹೋಟೆಲ್ಗೆ ಫಾರೆನ್ಸಿಕ್ ತಂಡ ಆಗಮಿಸಿದ್ದು, ಅಪರಾಧ ನಡೆದ ಘಟನಾ ಸ್ಥಳದಲ್ಲಿ ಸಾಕ್ಷ್ಯಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ತನಿಖೆಗೆ ಪೊಲೀಸರು ಮುಂದಾಗಿದ್ದು, ಕೊಲೆ ಹಿಂದಿನ ಉದ್ದೇಶ ಮತ್ತು ನಿಖರ ಕಾರಣ ತಿಳಿಯಲು ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: 'ಮಗಳ ಜೀವ ಉಳಿಸಲು ಸಹಾಯ ಮಾಡಿ, ಪ್ಲೀಸ್': ಮರಣದಂಡನೆ ಶಿಕ್ಷೆಗೊಳಗಾದ ಪ್ರಿಯಾ ತಾಯಿಯ ಮೊರೆ