ರೂರ್ಕಿ (ಉತ್ತರಾಖಂಡ್) : ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಕಳ್ಳತನದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದ್ಯದ ಅಮಲಿನಲ್ಲಿದ್ದ ಇಬ್ಬರು ಖದೀಮರು ಬೀಗ ಹಾಕಿರುವ ಮನೆಗೆ ನುಗ್ಗಿದ್ದರು. ಅತಿಯಾದ ನಶೆಯಲ್ಲಿ ಕಳ್ಳನೊಬ್ಬ ಅಲ್ಲೇ ಕುಸಿದು ಬಿದ್ದಿದ್ದಾನೆ. ಈತನೊಂದಿಗೆ ಬಂದಿದ್ದ ಮತ್ತೊಬ್ಬ ಖದೀಮ ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾನೆ. ಮನೆಯ ಮಾಲೀಕ ಬಂದಾಗ, ಆರೋಪಿ ಕಳ್ಳ ಅಮಲೇರಿದ ಸ್ಥಿತಿಯಲ್ಲಿ ಮಲಗಿದ್ದ. ಆತನನ್ನು ಮನೆಯ ಮಾಲೀಕ ಹಿಡಿದಿದ್ದಾರೆ. ಇದಾದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಮಾಹಿತಿ ಪ್ರಕಾರ ರೂರ್ಕಿ ಸಿವಿಲ್ ಲೈನ್ ಕೊತ್ವಾಲಿ ಪ್ರದೇಶದ ಜಾದುಗರ್ ರಸ್ತೆಯಲ್ಲಿ ಮಯಾಂಕ್ ಗೋಯಲ್ ಅವರ ಮನೆ ಇದೆ. ಮಯಾಂಕ್ ಗೋಯಲ್ ಅವರು ಡಿಸೆಂಬರ್ 28 ರಂದು ಬೆಳಗ್ಗೆ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶದ ಚಂದೌಸಿ ಪಟ್ಟಣದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಸೋಮವಾರ ತಡರಾತ್ರಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಪಾನಮತ್ತ ಕಳ್ಳ ಮನೆಯಲ್ಲೇ ಮಲಗಿದ್ದ: ಕೊಠಡಿಯೊಳಗೆ ಹೋಗಿ ನೋಡಿದಾಗ ಕುಡಿದ ಮತ್ತಿನಲ್ಲಿ ಕಳ್ಳ ಬಿದ್ದಿರುವುದು ಮಯಾಂಕ್ ಅವರಿಗೆ ಕಂಡು ಬಂದಿದೆ. ಕಳ್ಳನಿಂದ 10,000 ರೂಪಾಯಿ ನಗದು ಹಾಗೂ ಚಿನ್ನದ ಸರ ಸಿಕ್ಕಿದೆ. ಈತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ತನ್ನ ಸಹಚರ ಉಳಿದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪರಾರಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಕಿಟಕಿಯಲ್ಲಿದ್ದ ಕಬ್ಬಿಣದ ಗ್ರಿಲ್ ಮುರಿದು ಮನೆಯೊಳಗೆ ಪ್ರವೇಶಿಸಿರುವ ಆರೋಪಿ ವಿವರಿಸಿದ್ದಾನೆ.
ಲಕ್ಷ ಮೌಲ್ಯದ ಚಿನ್ನಾಭರಣ, ನಗದನ್ನು ದೋಚಿದ ಕಳ್ಳನ ಸಹಚರ: ಇದಾದ ಬಳಿಕ ಮನೆಯ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಕಳ್ಳನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಚಿನ್ನಾಭರಣದೊಂದಿಗೆ ಓಡಿಹೋದ ಕಳ್ಳ ಸುಮಾರು ಐದು ತೊಲೆ ಚಿನ್ನಾಭರಣ ಮತ್ತು 1.5 ಲಕ್ಷ ರೂ. ಹಣವನ್ನು ಕದ್ದೊಯ್ದಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದೆ ಎಂದು ಎಸ್ಪಿ ದೇಹತ್ ಶೇಖರ್ ಚಂದ್ರ ಸುಯಲ್ ತಿಳಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಕಳ್ಳನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇನ್ನೋರ್ವ ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ