ಪ್ಯಾರಿಸ್: ಈ ಬಾರಿ ಫ್ರಾನ್ಸ್ ಸಾರ್ವತ್ರಿಕ ಚುನಾವಣೆಯಲ್ಲಿ ಬಲಪಂಥೀಯ ಪಕ್ಷ ಗೆಲ್ಲುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಬುಡಮೇಲಾಗಿದೆ. 577 ಸ್ಥಾನಗಳನ್ನು ಹೊಂದಿರುವ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತಕ್ಕೆ ಅಗತ್ಯವಿರುವ 289 ಸ್ಥಾನಗಳ ಸಮೀಪ ಯಾವುದೇ ಪಕ್ಷವೂ ಬಂದಿಲ್ಲ.
ನ್ಯೂ ಪಾಪ್ಯುಲರ್ ಫ್ರಂಟ್ ಎಂಬ ಎಡ ಮೈತ್ರಿಕೂಟ ಗರಿಷ್ಠ 182 ಸ್ಥಾನಗಳನ್ನು ಗಳಿಸಿದೆ. ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸೆಂಟ್ರಿಸ್ಟ್ ಪಕ್ಷ 168 ಸ್ಥಾನಗಳನ್ನು ಗೆದ್ದಿದೆ. ಬಲಪಂಥೀಯ ರಾಸ್ಸೆಂಬ್ಲೆಮೆಂಟ್ ನ್ಯಾಷನಲ್ ಮತ್ತು ಅದರ ಮಿತ್ರಪಕ್ಷಗಳು 143 ಸ್ಥಾನಗಳನ್ನು ಪಡೆದಿವೆ. ಬಲಪಂಥೀಯ ಮೈತ್ರಿಕೂಟ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದರಿಂದಾಗಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಫ್ರೆಂಚ್ ಸಂಸತ್ತಿನ ಅವಧಿ 2027 ರಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ, ಜೂನ್ 9 ರಂದು ಯುರೋಪಿಯನ್ ಒಕ್ಕೂಟದಲ್ಲಿ ಭಾರೀ ಸೋಲಿನ ನಂತರ, ಅವಧಿಗೂ ಮುನ್ನ ಸಂಸತ್ತನ್ನು ವಿಸರ್ಜಿಸುವ ಮತ್ತು ಚುನಾವಣೆ ನಡೆಸುವ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಿರ್ಧಾರಕ್ಕೆ ಇದೀಗ ಹಿನ್ನಡೆಯಾಗಿದೆ.
ಚುನಾವಣೆಯಲ್ಲಿ ಬಲಪಂಥೀಯ ಪಕ್ಷ ಬಹುಮತ ಗಳಿಸುವ ನಿರೀಕ್ಷೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಡಪಕ್ಷಗಳು ಬಲಪಂಥೀಯರ ನಿರೀಕ್ಷೆಯನ್ನು ಹುಸಿಗೊಳಿಸಿದವು. ಫ್ರಾನ್ಸ್‌ನಲ್ಲಿ ಸಮ್ಮಿಶ್ರ ಸರ್ಕಾರದ ಇತಿಹಾಸವಿಲ್ಲ ಎಂಬುದು ಗಮನಾರ್ಹ.