ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ 4 ಹೊಸ ಪೋಲಿಯೊ ಪ್ರಕರಣ ಪತ್ತೆ, 32ಕ್ಕೇರಿದ ಸಂಖ್ಯೆ - POLIO CASES IN PAKISTAN

ಪಾಕಿಸ್ತಾನದಲ್ಲಿ ನಾಲ್ಕು ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿವೆ.

ಪೋಲಿಯೊ ಲಸಿಕಾ ಅಭಿಯಾನ (ಸಂಗ್ರಹ ಚಿತ್ರ)
ಪೋಲಿಯೊ ಲಸಿಕಾ ಅಭಿಯಾನ (ಸಂಗ್ರಹ ಚಿತ್ರ) (IANS)

By PTI

Published : Oct 9, 2024, 4:15 PM IST

ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಕನಿಷ್ಠ ನಾಲ್ಕು ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಕಾಣಿಸಿಕೊಂಡ ಪೋಲಿಯೊ ಪ್ರಕರಣಗಳ ಒಟ್ಟು ಸಂಖ್ಯೆ 32 ಕ್ಕೆ ತಲುಪಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ನಾಲ್ಕು ಹೊಸ ಪ್ರಕರಣಗಳ ಪೈಕಿ ಮೂರು ಸಿಂಧ್ ಪ್ರಾಂತ್ಯದಲ್ಲಿ ಮತ್ತು ಒಂದು ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಕಂಡು ಬಂದಿವೆ.

ಈ ವರ್ಷ ಇಲ್ಲಿಯವರೆಗೆ, ಬಲೂಚಿಸ್ತಾನದಲ್ಲಿ 16, ಸಿಂಧ್​ನಲ್ಲಿ 10, ಖೈಬರ್ ಪಖ್ತುನಖ್ವಾದಲ್ಲಿ 4 ಮತ್ತು ಪಂಜಾಬ್ ಹಾಗೂ ಇಸ್ಲಾಮಾಬಾದ್​ಗಳಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಏಳು ಪ್ರದೇಶಗಳ ಪೈಕಿ ಎರಡು ಪ್ರದೇಶಗಳು ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಮಾತ್ರ ಪೋಲಿಯೊ ಮುಕ್ತವಾಗಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪೋಲಿಯೊ ವೈರಸ್ ನಾಲ್ಕು ಪ್ರಾಂತ್ಯಗಳು ಮತ್ತು ಫೆಡರಲ್ ರಾಜಧಾನಿ ಸೇರಿದಂತೆ ಐದು ಪ್ರದೇಶಗಳಲ್ಲಿ ಹರಡಿದೆ.

ಈ ವರ್ಷದ ಸೆಪ್ಟೆಂಬರ್​ನಲ್ಲಿ ರಾಷ್ಟ್ರವ್ಯಾಪಿ ನಡೆಸಲಾದ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಪಾಕಿಸ್ತಾನ ಪೋಲಿಯೊ ನಿರ್ಮೂಲನಾ ಸಂಸ್ಥೆಯು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 33 ಮಿಲಿಯನ್ ಮಕ್ಕಳಿಗೆ ಲಸಿಕೆ ಹಾಕಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪೋಲಿಯೊದ ಅಪಾಯಕಾರಿ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಲಸಿಕಾ ಅಭಿಯಾನ ನಡೆಸಲಾಗಿದೆ. ಅಭಿಯಾನದ ಫಲಿತಾಂಶವನ್ನು ನಿರ್ಣಯಿಸಲು ಮತ್ತು ಇನ್ನೂ ಸುಧಾರಣೆಯಾಗಬೇಕಿರುವ ಕ್ಷೇತ್ರಗಳನ್ನು ಗುರುತಿಸಲು ಅಭಿಯಾನದ ಸಮಗ್ರ ಮೌಲ್ಯಮಾಪನ ನಡೆಸಲಾಗಿದೆ.

ಸೆಪ್ಟೆಂಬರ್​ನಲ್ಲಿ ನಡೆದ ಪೋಲಿಯೊ ಅಭಿಯಾನವು ದೇಶದ ಪೋಲಿಯೊ ನಿರ್ಮೂಲನಾ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಹಲವಾರು ಸವಾಲುಗಳನ್ನು ಎದುರಿಸಿದರೂ ಈ ಅಭಿಯಾನವು ಹೆಚ್ಚಿನ ಅಪಾಯದ ಪ್ರದೇಶಗಳು ಸೇರಿದಂತೆ ಬಹುತೇಕ ಸಂಖ್ಯೆಯ ಮಕ್ಕಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಾತ್ರ ಪೋಲಿಯೊ ಈಗಲೂ ಉಳಿದಿರುವ ವಿಶ್ವದ ಏಕೈಕ ದೇಶಗಳಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪೋಲಿಯೊ ರೋಗವು ಪೋಲಿಯೊವೈರಸ್ ನಿಂದ ಉಂಟಾಗುತ್ತದೆ. ಇದು ನರಮಂಡಲದ ಮೇಲೆ ಆಕ್ರಮಣ ಮಾಡುವ ಅತ್ಯಂತ ಸಾಂಕ್ರಾಮಿಕವಾಗಿ ಹರಡುವ ವೈರಸ್ ಆಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕದ ಮೂಲಕ ಅಥವಾ ಕಲುಷಿತ ಆಹಾರ ಅಥವಾ ಕಲುಷಿತ ನೀರನ್ನು ಸೇವಿಸುವ ಮೂಲಕ ಹರಡುತ್ತದೆ. ವೈರಸ್ ಮಲ-ಬಾಯಿಯ ಮಾರ್ಗದ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ಗಂಟಲಿನಿಂದ ಹನಿಗಳ ಮೂಲಕ ಹರಡಬಹುದು.

ಇದನ್ನೂ ಓದಿ : ಲೆಬನಾನ್​ನ 125 ಸ್ಥಳಗಳ ಮೇಲೆ ದಾಳಿ, 50 ಹಿಜ್ಬುಲ್ಲಾ ಉಗ್ರರು ಹತ: ಐಡಿಎಫ್ ಪ್ರತಿಪಾದನೆ

ABOUT THE AUTHOR

...view details