ಕಜಾನ್ (ರಷ್ಯಾ):ಗಡಿ ವಿಷಯದಲ್ಲಿ ಮುನಿಸಿಕೊಂಡಿದ್ದ ಭಾರತ-ಚೀನಾ ಸಂಬಂಧ ಮತ್ತೆ ಹಳಿ ಏರುವ ಸೂಚನೆ ದಟ್ಟವಾಗಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಕೈ ಕುಲುಕಿ ಸಂಕ್ಷಿಪ್ತ ಸಂಭಾಷಣೆ ನಡೆಸಿದರು. ಬಳಿಕ ಉಭಯ ರಾಷ್ಟ್ರಗಳ ನಡುವೆ ಐದು ವರ್ಷಗಳ ಬಳಿಕ ಪೂರ್ಣಾವಧಿ ದ್ವಿಪಕ್ಷೀಯ ಸಭೆ ನಡೆಯಿತು.
ಕೆಲ ದಿನಗಳ ಹಿಂದಷ್ಟೇ ಪೂರ್ವ ಲಡಾಖ್ನಲ್ಲಿ ಎರಡೂ ರಾಷ್ಟ್ರಗಳ ಸೇನೆಗಳು ಗಡಿ ಗಸ್ತು ತಿರುಗಲು ಒಪ್ಪಿಗೆ ಸೂಚಿಸಿದ ಬಳಿಕದ, ನಾಯಕರ ನಡುವಿನ ಮೊದಲ ಸಭೆ ಇದಾಗಿದೆ. ಭಾರೀ ಕುತೂಹಲ ಮೂಡಿಸಿದ್ದ ದ್ವಿಪಕ್ಷೀಯ ಮಾತುಕತೆಯಲ್ಲಿ ಗಡಿ ಶಾಂತಿ ಬಗ್ಗೆ ಚರ್ಚೆ ನಡೆದಿದೆ.
ಪ್ರಧಾನಿ ಮೋದಿ ಹೇಳಿದ್ದೇನು?ಭಾರತ- ಚೀನಾ ಬಾಂಧವ್ಯವು ಉಭಯ ರಾಷ್ಟ್ರಗಳ ನಾಗರಿಕರಿಗೆ ಮಾತ್ರವಲ್ಲ, ಜಾಗತಿಕ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಬಹಳ ಮುಖ್ಯ ಎಂದು ನಾವು ನಂಬುತ್ತೇವೆ. ಈವರೆಗೆ ಉಂಟಾದ ಸಮಸ್ಯೆಗಳ ಬಗ್ಗೆ ಒಮ್ಮತ ಮೂಡಿದ್ದನ್ನು ದೇಶ ಸ್ವಾಗತಿಸುತ್ತದೆ. ಗಡಿಯಲ್ಲಿ ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಸಂವೇದನಾಶೀಲತೆ ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದರು.
ಗಡಿ ಒಪ್ಪಂದಕ್ಕೆ ಅಧಿಕೃತ ಮುದ್ರೆ:ಪೂರ್ವ ಲಡಾಖ್ನಲ್ಲಿ ಗಡಿ ಗಸ್ತು ವಿಚಾರವಾಗಿ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆ ಹಾಡಿ, ಉಭಯ ಸೇನೆಗಳ ಮಧ್ಯೆ ಏರ್ಪಟ್ಟ ಒಪ್ಪಂದಕ್ಕೆ ಉಭಯ ನಾಯಕರು ಅಧಿಕೃತ ಮುದ್ರೆ ಒತ್ತಿದರು. ಪರಸ್ಪರ ದೇಶಗಳ ನಡುವಿನ ಗೌರವ, ಗಡಿ ರಕ್ಷಣೆ ಮಾಡಿಕೊಳ್ಳುವ ಮೂಲಕ ಶಾಂತಿಯುತ ಮತ್ತು ಸ್ಥಿರ ಸಂಬಂಧವನ್ನು ಹೊಂದಲು ನಾಯಕರು ಸಹಮತ ವ್ಯಕ್ತಪಡಿಸಿದರು.