ಖಾರ್ಟೂಮ್: ಸುಡಾನ್ ಸೇನೆಯು ರಾಜಧಾನಿ ಖಾರ್ಟೂಮ್ನಲ್ಲಿ ತನ್ನ ಪ್ರತಿಸ್ಪರ್ಧಿ ಅರೆಸೈನಿಕ ಪಡೆಗಳ ವಿರುದ್ಧ ಭೀಕರ ದಾಳಿಯನ್ನು ಆರಂಭಿಸಿದೆ. ಇದು ನಗರದ ಮೇಲೆ ಮರಳಿ ನಿಯಂತ್ರಣ ಸಾಧಿಸುವಲ್ಲಿ ಕಳೆದ ಕೆಲ ತಿಂಗಳಲ್ಲಿ ಸೇನೆಯ ಅತ್ಯಂತ ಮಹತ್ವದ ಪ್ರಯತ್ನವಾಗಿದೆ ಎಂದು ಮಿಲಿಟರಿ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಧ್ಯ ಖಾರ್ಟೂಮ್ ಮತ್ತು ಅದರ ನೆರೆಯ ನಗರಗಳಾದ ಒಮ್ದುರ್ಮನ್ ಮತ್ತು ಬಹ್ರಿಯಲ್ಲಿ ಭಾರಿ ಹೋರಾಟ ನಡೆಯುತ್ತಿದೆ. ವಾಯು ದಾಳಿ, ಫಿರಂಗಿ ದಾಳಿ ಮತ್ತು ಲಘು ಮತ್ತು ಮಧ್ಯಮ ಶಸ್ತ್ರಾಸ್ತ್ರಗಳನ್ನು ಒಳಗೊಂಡ ಘರ್ಷಣೆಗಳು ನಡೆಯುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಖಾರ್ಟೂಮ್ನಲ್ಲಿ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ಎಸ್ಎಫ್) ಯ ನಿಯಂತ್ರಣದಲ್ಲಿರುವ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸೇನೆ ಪ್ರಯತ್ನಿಸುತ್ತಿದೆ ಎಂದು ಮಿಲಿಟರಿ ಮೂಲಗಳು ಗುರುವಾರ ತಿಳಿಸಿವೆ.
"ಇಂದು, ಸೇನೆಯು ಮಧ್ಯ ಖಾರ್ಟೂಮ್ನ ಆಯಕಟ್ಟಿನ ಪ್ರದೇಶಗಳ ಮೇಲೆ ನೆಲದ ದಾಳಿಯನ್ನು ಪ್ರಾರಂಭಿಸಿದೆ. ಅರೆಸೇನಾಪಡೆಗಳನ್ನು ಪ್ರಮುಖ ಸ್ಥಳಗಳಿಂದ ಹೊರಹಾಕಲು ಅತಿದೊಡ್ಡ ಮತ್ತು ವ್ಯಾಪಕವಾದ ದಾಳಿ ಇದಾಗಿದೆ" ಎಂದು ಮೂಲಗಳು ಕ್ಸಿನ್ಹುವಾಗೆ ತಿಳಿಸಿವೆ.
ಸೇನೆಯ ಜನರಲ್ ಕಮಾಂಡ್ ಕಚೇರಿ, ಜನರಲ್ ಇಂಟೆಲಿಜೆನ್ಸ್ ಸರ್ವಿಸ್ ಪ್ರಧಾನ ಕಚೇರಿ ಮತ್ತು ಖಾರ್ಟೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಆದಾಗ್ಯೂ ಈ ಕಾರ್ಯಾಚರಣೆಯ ಬಗ್ಗೆ ಸೇನೆ ಅಧಿಕೃತ ಮಾಹಿತಿ ನೀಡಿಲ್ಲ.