ನವದೆಹಲಿ: ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಭಾನುವಾರ ಇಂಡೋನೇಷ್ಯಾಕ್ಕೆ ಆಗಮಿಸಿದ್ದು, ಅಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಸ್ಟಾರ್ ಲಿಂಕ್ ಅನ್ನು ಪ್ರಾರಂಭಿಸುವ ಗುರಿ ಹೊಂದಿದ್ದಾರೆ. ಮೊದಲ ಬಾರಿಗೆ ಇಂಡೋನೇಷ್ಯಾಕ್ಕೆ ಆಗಮಿಸಿರುವ ಮಸ್ಕ್, ದೇಶದ ಅಧ್ಯಕ್ಷ ಜೋಕೊ ವಿಡೋಡೋ ಅವರನ್ನು ಭೇಟಿ ಮಾಡಿದ್ದಾರೆ.
ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಬಿಲಿಯನೇರ್ ಮುಖ್ಯಸ್ಥ ಮತ್ತು ಸಾಮಾಜಿಕ ಪ್ಲಾಟ್ಫಾರ್ಮ್ ಎಕ್ಸ್ ಮಾಲೀಕ ತಮ್ಮ ಖಾಸಗಿ ಜೆಟ್ನಲ್ಲಿ ಸುಂದರವಾದ ಬಾಲಿ ದ್ವೀಪಕ್ಕೆ ಆಗಮಿಸಿದರು.
"ಇಂದು ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಎಲೋನ್ ಅವರನ್ನು ಸ್ವಾಗತಿಸುವ ಅವಕಾಶ ನನಗೆ ಸಿಕ್ಕಿದೆ. ನಂತರ ಅವರೊಂದಿಗೆ ಅವರ ಕೆಲ ಕಾರ್ಯಸೂಚಿಗಳ ಬಗ್ಗೆ ಮತ್ತು ಕೆಲ ಪ್ರಮುಖ ಒಪ್ಪಂದಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಇಂಡೋನೇಷ್ಯಾದ ಎಲ್ಲಾ ಮೂಲೆಗಳನ್ನು ತಲುಪುವ ಸಾಮರ್ಥ್ಯವಿರುವ ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಯ ಉದ್ಘಾಟನೆ ಅವುಗಳಲ್ಲೊಂದಾಗಿದೆ" ಎಂದು ಕಡಲ ವ್ಯವಹಾರ ಮತ್ತು ಹೂಡಿಕೆ ಸಚಿವ ಲುಹುತ್ ಪಂಜೈತಾನ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
"ದೇಶಾದ್ಯಂತ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಮೂಲಕ, ಇಂಡೋನೇಷ್ಯಾದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅನುಷ್ಠಾನದಲ್ಲಿ ಡಿಜಿಟಲೀಕರಣದ ಅಳವಡಿಕೆಯು ಮುಂದುವರಿಯಲಿದೆ" ಎಂದು ಅವರು ಹೇಳಿದರು. ಬಾಲಿಯಲ್ಲಿ ನಡೆಯಲಿರುವ ವಿಶ್ವ ಜಲ ಸಮಾವೇಶದಲ್ಲಿ ಟೆಕ್ ಬಿಲಿಯನೇರ್ ಮಸ್ಕ್ ಮಾತನಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.