ಕರ್ನಾಟಕ

karnataka

ETV Bharat / international

ಸಿರಿಯಾದಲ್ಲಿ ಚುನಾವಣೆ ನಡೆಸಲು 4 ವರ್ಷ ಬೇಕಾಗಬಹುದು: ಆಡಳಿತದ ಮುಖ್ಯಸ್ಥ ಅಹ್ಮದ್ ಅಲ್ - ಶರಾ ಹೇಳಿಕೆ - ELECTIONS IN SYRIA

ಸಿರಿಯಾದಲ್ಲಿ ಚುನಾವಣೆ ನಡೆಸಲು ಕನಿಷ್ಠ 4 ವರ್ಷಗಳ ಸಮಯ ಬೇಕಾಗಬಹುದು ಎಂದು ಆಡಳಿತದ ಮುಖ್ಯಸ್ಥ ಅಹ್ಮದ್ ಅಲ್-ಶರಾ ಹೇಳಿದ್ದಾರೆ.

ಅಹ್ಮದ್ ಅಲ್-ಶರಾ
ಅಹ್ಮದ್ ಅಲ್-ಶರಾ (ians)

By IANS

Published : Dec 30, 2024, 12:57 PM IST

ಡಮಾಸ್ಕಸ್: ಯುದ್ಧಪೀಡಿತ ಸಿರಿಯಾದಲ್ಲಿ ಚುನಾವಣೆ ನಡೆಸಲು ಕನಿಷ್ಠ ನಾಲ್ಕು ವರ್ಷ ಬೇಕಾಗಬಹುದು ಎಂದು ಪ್ರಸ್ತುತ ಸಿರಿಯಾದ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖಂಡ ಅಹ್ಮದ್ ಅಲ್-ಶರಾ ಹೇಳಿದ್ದಾರೆ. ಮೂರು ವಾರಗಳ ಹಿಂದೆ ಅಲ್ - ಶರಾ ನೇತೃತ್ವದಲ್ಲಿ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್​ಟಿಎಸ್) ಹೋರಾಟಗಾರರು ದೀರ್ಘಕಾಲದ ಆಡಳಿತಗಾರ ಬಷರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಚುನಾವಣಾ ವೇಳಾಪಟ್ಟಿಯ ಬಗ್ಗೆ ಹೊಸ ಸಿರಿಯನ್ ನಾಯಕ ಪ್ರತಿಕ್ರಿಯಿಸಿದ್ದಾರೆ.

ದೇಶಕ್ಕೆ ಹೊಸ ಸಂವಿಧಾನ ರಚಿಸಲು ಮೂರು ವರ್ಷ ಬೇಕಾಗಬಹುದು ಎಂದು ಅಲ್-ಶರಾ ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮ ಅಲ್ ಅರೇಬಿಯಾಕ್ಕೆ ಭಾನುವಾರ ತಿಳಿಸಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಸಿರಿಯಾದಲ್ಲಿ ಗಮನಾರ್ಹ ಬದಲಾವಣೆ ತರಲಾಗುವುದು ಮತ್ತು ಸಿರಿಯಾದಲ್ಲಿ ಅತ್ಯಂತ ಪ್ರಬಲ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿರುವ ಎಚ್​ಟಿಎಸ್ ರಾಷ್ಟ್ರೀಯ ಸಂವಾದ ಸಮ್ಮೇಳನದಲ್ಲಿ ವಿಸರ್ಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಅರ್ಹ ಮತದಾರರ ಸಂಖ್ಯೆಯನ್ನು ತಿಳಿಯಲು ಹೊಸ ಜನಗಣತಿಯನ್ನು ನಡೆಸಬೇಕಾಗಿರುವುದರಿಂದ ನಾಲ್ಕು ವರ್ಷಗಳ ನಂತರ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಅಸ್ಸಾದ್ ಬೆಂಬಲಿಗರ ಬಂಧನ: ಸಿರಿಯಾದ ಹೊಸ ಮಧ್ಯಂತರ ಆಡಳಿತದ ಅಧಿಕಾರಿಗಳು ಅಸ್ಸಾದ್ ಬೆಂಬಲಿಗರ ನೆಲೆಗಳ ಮೇಲೆ ದಾಳಿ ಆರಂಭಿಸಿದ್ದು, ಸುಮಾರು 300 ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಕರಾವಳಿ ಪ್ರಾಂತ್ಯದ ಲಟಾಕಿಯಾ ಮತ್ತು ಹಮಾದಲ್ಲಿ ದಲ್ಲಿ ಶನಿವಾರ ಮತ್ತು ಗುರುವಾರ ಅಸ್ಸಾದ್ ಬೆಂಬಲಿಗ ಹೋರಾಟಗಾರರು ಮತ್ತು ಕೆಲ ಶಂಕಿತ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಸನಾ ದೃಢಪಡಿಸಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕೂಡ ದಾಳಿಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸನಾ ವರದಿ ಮಾಡಿದೆ.

ಗೂಢಚಾರರು, ಅಸಾದ್ ಆಡಳಿತ ಪರ ಮತ್ತು ಇರಾನ್ ಪರವಾಗಿರುವ ಸಶಸ್ತ್ರ ಹೋರಾಟಗಾರರು ಮತ್ತು ಕೆಳದರ್ಜೆಯ ಮಿಲಿಟರಿ ಅಧಿಕಾರಿಗಳು ಬಂಧಿತರಲ್ಲಿ ಸೇರಿದ್ದಾರೆ ಎಂದು ವೀಕ್ಷಣಾಲಯ ಭಾನುವಾರ ತಿಳಿಸಿದೆ. ಡಮಾಸ್ಕಸ್, ಲಟಾಕಿಯಾ, ಟಾರ್ಟಸ್ ಮತ್ತು ಹೋಮ್ಸ್ ಪ್ರದೇಶಗಳಲ್ಲಿನ ಹಿಂದಿನ ಅಸ್ಸಾದ್ ಆಡಳಿತದೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹೊಸ ಆಡಳಿತದ ಭದ್ರತಾ ಪಡೆಗಳು ಗುರುವಾರ ವ್ಯಾಪಕ ಕಾರ್ಯಾಚರಣೆ ಪ್ರಾರಂಭಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕುಖ್ಯಾತ ಸದ್ನಾಯಾ ಜೈಲಿನಲ್ಲಿ ಸಾವಿರಾರು ಜನರ ಮರಣ ದಂಡನೆಯ ವಿಚಾರಣೆಯ ಮೇಲ್ವಿಚಾರಣೆ ನಡೆಸಿದ್ದ ಮಿಲಿಟರಿ ನ್ಯಾಯಾಲಯದ ಮಾಜಿ ಮುಖ್ಯಸ್ಥ ಜನರಲ್ ಮೊಹಮ್ಮದ್ ಕಾಂಜೋ ಹಸನ್ ಅವರನ್ನು ಕೂಡ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ವ್ಯಕ್ತಿಗಳ ಬಂಧನಕ್ಕೆ ಸ್ಥಳೀಯ ನಿವಾಸಿಗಳು ಸಹಕಾರ ನೀಡಿದ್ದಾರೆ ಮತ್ತು ಸಾಮಾನ್ಯ ನಾಗರಿಕರನ್ನು ನಿಶ್ಯಸ್ತ್ರೀಕರಣಗೊಳಿಸಲು ಅಭಿಯಾನ ನಡೆಸಲಾಗುತ್ತಿದೆ ಎಂದು ವೀಕ್ಷಣಾಲಯ ಹೇಳಿದೆ.

ಇದನ್ನೂ ಓದಿ : ಅಫ್ಘಾನ್-ಪಾಕ್ ಗಡಿ ಪಡೆಗಳ ನಡುವೆ ಘರ್ಷಣೆ: ಪಾಕಿಸ್ತಾನದ 19 ಸೈನಿಕರು ಸೇರಿ 22 ಸಾವು - AFGHAN AND PAK BORDER FORCES CLASH

ABOUT THE AUTHOR

...view details