ಬ್ರೆಸಿಲಿಯಾ:ದೇಶದ ತಾರೌಕಾ ಪಟ್ಟಣ ವಾಯುವ್ಯಕ್ಕೆ 123 ಕಿ.ಮೀ ದೂರದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 6.5 ರಷ್ಟಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದು 7.32 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 71.51 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 628.8 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.
ಚಂಡಮಾರುತಕ್ಕೆ ಮೂವರು ಬಲಿ: ಸಾವೊ ಪಾಲೊ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಭೀಕರ ಚಂಡಮಾರುತಕ್ಕೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಬ್ರೆಜಿಲ್‌ನ ಅಧಿಕೃತ ಸುದ್ದಿ ಸಂಸ್ಥೆ ಪ್ರಕಾರ, ಲಿಮಿರಾ ನಗರದಲ್ಲಿ ಇಬ್ಬರು ಮಹಿಳೆಯರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ದಕ್ಷಿಣ ಮತ್ತು ಆಗ್ನೇಯ ಬ್ರೆಜಿಲ್‌ಗೆ ಬಲವಾದ ಗಾಳಿಯೊಂದಿಗೆ ಚಂಡಮಾರುತಗಳು ಅಪ್ಪಳಿಸುತ್ತಿವೆ. ಇದು ಆಸ್ತಿ, ಜೀವಹಾನಿ ಉಂಟುಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ್ಯ ರಾಜಧಾನಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸೊರೊಕಾಬಾದ ಎರಡು ಸಾರ್ವಜನಿಕ ಆಸ್ಪತ್ರೆಗಳು ಮುಳುಗಿದ ನಂತರ ಸರ್ಕಾರ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಅರ್ಜೆಂಟಿನಾದಲ್ಲೂ ಭೂಕಂಪನ:ಅರ್ಜೆಂಟಿನಾದಲ್ಲಿ ಶನಿವಾರ ಮಧ್ಯರಾತ್ರಿಯ ನಂತರ ಜನರಿಗೆ ಭೂಕಂಪನದ ಅನುಭವವಾಗಿದೆ. ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್‌ನಿಂದ 102 ಕಿ.ಮೀ ಉತ್ತರ-ವಾಯವ್ಯದಲ್ಲಿ ಭೂಕಂಪವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಭಾನುವಾರ ತಿಳಿಸಿದೆ. ಭೂಕಂಪದ ತೀವ್ರತೆ 5.4 ದಾಖಲಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಶನಿವಾರ-ಭಾನುವಾರ ರಾತ್ರಿ 02:36ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಭೂ ಮೇಲ್ಮೈಯಿಂದ ಸುಮಾರು 206.5 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.