ಬ್ರಿಸ್ಬೇನ್, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಭಾರತದ ನೂತನ ಕಾನ್ಸುಲೇಟ್ ಜನರಲ್ (ರಾಯಭಾರ ಕಚೇರಿ) ಅನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಉದ್ಘಾಟಿಸಿದರು. ಪ್ರಸ್ತುತ ಎರಡು ರಾಷ್ಟ್ರಗಳ ಪ್ರವಾಸದಲ್ಲಿರುವ ಜೈಶಂಕರ್ ನವೆಂಬರ್ 7 ರವರೆಗೆ ಆಸ್ಟ್ರೇಲಿಯಾದಲ್ಲಿರಲಿದ್ದು, ನವೆಂಬರ್ 8 ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಅವರು ಭಾನುವಾರ ಬ್ರಿಸ್ಬೇನ್ ಗೆ ಆಗಮಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, "ಬ್ರಿಸ್ಬೇನ್ನಲ್ಲಿ ಇಂದು ಭಾರತದ ಹೊಸ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಔಪಚಾರಿಕವಾಗಿ ಉದ್ಘಾಟಿಸಿರುವುದು ಸಂತೋಷ ತಂದಿದೆ. ಇದು ಕ್ವೀನ್ಸ್ ಲ್ಯಾಂಡ್ ರಾಜ್ಯದೊಂದಿಗಿನ ಭಾರತದ ಸಂಬಂಧವನ್ನು ಬಲಪಡಿಸಲು, ವ್ಯಾಪಾರವನ್ನು ಉತ್ತೇಜಿಸಲು, ಶೈಕ್ಷಣಿಕ ಸಂಪರ್ಕಗಳನ್ನು ಬೆಳೆಸಲು ಮತ್ತು ವಲಸಿಗರಿಗೆ ಸೇವೆ ಸಲ್ಲಿಸಲು ಕೊಡುಗೆ ನೀಡಲಿದೆ." ಎಂದು ಹೇಳಿದ್ದಾರೆ.
ಪ್ರಮುಖ ಅಧಿಕಾರಿಗಳ ಉಪಸ್ಥಿತಿ ಶ್ಲಾಘಿಸಿದ ಜೈಶಂಕರ್:ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ವೀನ್ಸ್ ಲ್ಯಾಂಡ್ ಗವರ್ನರ್ ಡಾ. ಜೀನೆಟ್ ಯಂಗ್ ಮತ್ತು ಸಚಿವರಾದ ರೋಸ್ ಬೇಟ್ಸ್ ಮತ್ತು ಫಿಯೋನಾ ಸಿಂಪ್ಸನ್ ಸೇರಿದಂತೆ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯನ್ನು ಜೈಶಂಕರ್ ಶ್ಲಾಘಿಸಿದರು. ನಂತರ ಪ್ರತ್ಯೇಕ ಸಭೆಯಲ್ಲಿ, ಜೈಶಂಕರ್ ಗವರ್ನರ್ ಯಂಗ್ ಅವರೊಂದಿಗೆ ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಸಹಕಾರ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರು.
"ಇಂದು ಬ್ರಿಸ್ಬೇನ್ ನಲ್ಲಿ ಕ್ವೀನ್ಸ್ ಲ್ಯಾಂಡ್ ನ ಗವರ್ನರ್ ಗೌರವಾನ್ವಿತ ಡಾ. ಜೀನೆಟ್ ಯಂಗ್ ಅವರನ್ನು ಭೇಟಿಯಾಗಿರುವುದು ಸಂತೋಷ ತಂದಿದೆ. ಕ್ವೀನ್ಸ್ ಲ್ಯಾಂಡ್ ರಾಜ್ಯದೊಂದಿಗೆ ಆರ್ಥಿಕ, ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ಬಲಪಡಿಸುವ ಅವಕಾಶಗಳು ಮತ್ತು ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು" ಎಂದು ಅವರು ಪೋಸ್ಟ್ ಮಾಡಿದ್ದಾರೆ.