ಸ್ಯಾಂಟಿಯಾಗೊ (ಚಿಲಿ): ದಕ್ಷಿಣ ಅಮೆರಿಕದ ದೇಶ ಚೀಲಿಯಲ್ಲಿ ಕಾಳ್ಗಿಚ್ಚು ಮುಂದುವರೆದಿದೆ. ಚಿಲಿಯಲ್ಲಿ ಸಾವಿನ ಸಂಖ್ಯೆ 99 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಲಿಯ ಕರಾವಳಿ ನಗರಗಳಲ್ಲಿ ಹೊಗೆ ಆವರಿಸಿದ್ದರಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಾಳ್ಗಿಚ್ಚು ವ್ಯಾಪಿಸಿರುವ ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ ಮನೆಗಳಿಂದ ಸ್ಥಳಾಂತರಗೊಳ್ಳುವಂತೆ ಅಲ್ಲಿನ ಸರ್ಕಾರ ಮನವಿ ಮಾಡಿದೆ.
ಚೀಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ಕಾಳ್ಗಿಚ್ಚಿನಿಂದ ಸಂಕಷ್ಟಕ್ಕೀಡಾದ ಪ್ರದೇಶಗಳಿಗೆ ಭೇಟಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಆ ಬಳಿಕ ಜನರು ಮುನ್ನೆಚ್ಚರಿಕೆಯಾಗಿ ಸಂಕಷ್ಟಕ್ಕೀಡಾಗಿರುವ ಪ್ರದೇಶಗಳಲ್ಲಿನ ಮನೆಗಳನ್ನು ತೊರೆದು ದೂರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು. ಇನ್ನು ಭಾರಿ ಕಾಳ್ಗಿಚ್ಚಿನಲ್ಲಿ ಸಾವಿಗೀಡಾದವರ ಗೌರವಾರ್ಥ ಸೋಮವಾರ ಮತ್ತು ಮಂಗಳವಾರ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುವುದು ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಭಾನುವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಚೀಲಿ ಅಧ್ಯಕ್ಷರು, ಕಾಳ್ಗಿಚ್ಚಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು. ಡೆಲ್ ಮಾರ್, ಕ್ವಿಲ್‌ಪ್ಯೂ, ವಿಲ್ಲಾ ಅಲೆಮಾನಾ ಮತ್ತು ಲಿಮಾಚೆ ಪಟ್ಟಣಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ವಾಲ್‌ಪಾರೈಸೊ ಪ್ರದೇಶದ ಗವರ್ನರ್ ರೋಡ್ರಿಗೋ ಮುಂಡಾಕಾ ಭಾನುವಾರ ಘೋಷಿಸಿದ್ದಾರೆ. ಮತ್ತೊಂದಡೆ ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಇಂತಹ ಘಟನೆ ನಡೆದಿರುವುದು ಇದುವರೆಗಿನ ಅತ್ಯಂತ ದೊಡ್ಡ ದುರಂತ ಎಂದು ಹೇಳಲಾಗಿದೆ. ಸುಮಾರು 1,400 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.