ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರಿದಿದೆ. ವಿದ್ಯಾರ್ಥಿ ಸಂಘಟನೆಗಳ ದಂಗೆಯಿಂದ ದೇಶ ತತ್ತರಿಸಿದೆ. ಜಶೋರ್ ಜಿಲ್ಲೆಯಲ್ಲಿ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲದಾರ್ ಅವರಿಗೆ ಸೇರಿದ ಜಬೀರ್ ಇಂಟರ್ನ್ಯಾಷನಲ್ ಹೋಟೆಲ್ಗೆ ಗಲಭೆಕೋರರು ಬೆಂಕಿ ಹಚ್ಚಿದ್ದು, 24 ಮಂದಿ ಸಜೀವ ದಹನವಾಗಿದ್ದಾರೆ.
440ಕ್ಕೇರಿದ ಸಾವಿನ ಸಂಖ್ಯೆ:ಕಳೆದ 21 ದಿನಗಳಿಂದ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 440 ತಲುಪಿದೆ. ಪರಿಸ್ಥಿತಿ ಹತೋಟಿಗೆ ತರಲು ಸೇನೆ ಪ್ರಯತ್ನಿಸುತ್ತಿದೆ. ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದ ಕೆಲವೇ ಗಂಟೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಜುಲೈನಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನಂತರ ವಿವಿಧ ಭಾಗಗಳಲ್ಲಿ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರು.