ವಾಷಿಂಗ್ಟನ್ (ಅಮೆರಿಕ):ಹಮಾಸ್- ಇಸ್ರೇಲ್ ಯುದ್ಧದ ಪರಿಣಾಮಗಳು ಅಮೆರಿಕದಲ್ಲಿ ವ್ಯಾಪಕವಾಗಿ ಗೋಚರಿಸುತ್ತಿವೆ. ಇಸ್ರೇಲ್ - ಹಮಾಸ್ ಯುದ್ಧದ ಕುರಿತು ಈ ತಿಂಗಳು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದ ಹಿನ್ನೆಲೆ, ವಿದ್ಯಾರ್ಥಿಗಳು ಇತರ ಕಾಲೇಜು ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಪ್ರಯತ್ನಗಳನ್ನು ಬೆಂಬಲಿಸುವ ಸಂಸ್ಥೆಗಳು, ವಿಶ್ವವಿದ್ಯಾಲಯಗಳನ್ನು ದೂರವಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ನ್ಯೂಯಾರ್ಕ್ ಪೊಲೀಸರು ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದಂತೆ ಟೆಕ್ಸಾಸ್, ಉತಾಹ್, ವರ್ಜೀನಿಯಾ, ನಾರ್ತ್ ಕೆರೊಲಿನಾ, ನ್ಯೂ ಮೆಕ್ಸಿಕೊ, ಕನೆಕ್ಟಿಕಟ್ ಮತ್ತು ನ್ಯೂಜೆರ್ಸಿ ಕ್ಯಾಂಪಸ್‌ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಅಮೆರಿಕ ದೇಶಾದ್ಯಂತ ಬಂಧಿಸಲಾದ ಪ್ರತಿಭಟನಾಕಾರರ ಸಂಖ್ಯೆ ಇದೀಗ 1,000ಕ್ಕೆ ತಲುಪಿದೆ.
ಪ್ರತಿಭಟನೆಗಳಲ್ಲಿ ಹೊರಗಿನವರೂ ಭಾಗಿ:ಅನೇಕ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಗುಂಪುಗಳಿಂದ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೊರಗಿನವರೂ ಸೇರಿಕೊಂಡು ತೊಂದರೆ ಸೃಷ್ಟಿಸಿದ್ದಾರೆ ಎಂದು ಕೆಲವು ವಿಶ್ವವಿದ್ಯಾಲಯಗಳು ಹೇಳಿವೆ. ಈ ಪ್ರತಿಭಟನೆಗಳು ಕೆನಡಾ ಮತ್ತು ಯುರೋಪ್‌ಗೆ ಹರಡಿದೆ.
ಸೊರ್ಬೊನ್ ವಿಶ್ವವಿದ್ಯಾಲಯದ ಮುಖ್ಯ ಅಂಗಳವನ್ನು ಪ್ಯಾಲೇಸ್ಟಿನಿಯನ್ ಪರ ಪ್ರತಿಭಟನಾಕಾರರು ವಶಕ್ಕೆ ತೆಗೆದುಕೊಂಡ ನಂತರ, ಫ್ರೆಂಚ್ ಪೊಲೀಸರು, ಅಲ್ಲಿಂದ ಹಲವಾರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿದಿರುವುದರಿಂದ ಅಧಿಕಾರಿಗಳು ಪ್ರತಿಭಟನೆ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.