ಬಿಜಾಪುರ (ಛತ್ತೀಸ್‌ಗಢ) : ಹೊಸ ವರ್ಷದ ಮೊದಲ ದಿನದಂದು ನಾಪತ್ತೆಯಾಗಿದ್ದ ಪತ್ರಕರ್ತ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖೇಶ್ ಚಂದ್ರಾಕರ್ (32) ಮೃತ ಪತ್ರಕರ್ತ. ಈತ ಹಲವು ಮಾಧ್ಯಮಗಳಿಗೆ ವರದಿಗಾರಿಕೆ ಮಾಡಿದ್ದಾರೆ. ನಕ್ಸಲ್ವಾದದ ಬಗ್ಗೆ ವರದಿ ಮಾಡುತ್ತಿದ್ದ ಈತನಿಗೆ ಜೀವ ಬೆದರಿಕೆಗಳು ಬರುತ್ತಿದ್ದವು. ಜನವರಿ 1ನೇ ತಾರೀಖಿನಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿ, ಪೊಲೀಸರು ಹುಡುಕಾಟ ನಡೆಸಿದಾಗ ಬಿಜಾಪುರ ರಸ್ತೆಯ ಗುತ್ತಿಗೆದಾರರೊಬ್ಬರ ಮನೆಯ ಆವರಣದಲ್ಲಿನ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜನವರಿ 1 ರಂದು ಸ್ಥಳೀಯ ಗುತ್ತಿಗೆದಾರನ ಸೋದರ ಸಂಬಂಧಿಯಿಂದ ಕರೆ ಬಂದ ನಂತರ ಅವರು ನಾಪತ್ತೆಯಾಗಿದ್ದರು. ತಮ್ಮನ್ನು ಗುತ್ತಿಗೆದಾರನ ಸಹೋದರ ಭೇಟಿ ಮಾಡುವ ಬಗ್ಗೆ ಮುಕೇಶ್ ಇನ್ನೊಬ್ಬ ಪತ್ರಕರ್ತನಿಗೆ ಮಾಹಿತಿ ನೀಡಿದ್ದ. ಹೊಸ ವರ್ಷದ ದಿನದಂದು ಮಧ್ಯರಾತ್ರಿ 12.30 ಕ್ಕೆ ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತರೂ ಆಗಿರುವ ಮುಕೇಶ್ ಅವರ ಸಹೋದರ ಯುಕೇಶ್ ಅವರು ಜನವರಿ 2 ರಂದು ಸಹೋದರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪತ್ರಕರ್ತನ ಪತ್ತೆಗಾಗಿ ಬಸ್ತಾರ್ ಐಜಿ ಪಿ.ಸುಂದರರಾಜ್ ವಿಶೇಷ ತಂಡವನ್ನು ರಚಿಸಿದ್ದರು.
ಗುತ್ತಿಗೆದಾರನ ಮೇಲೆ ಶಂಕೆ: ಪತ್ರಕರ್ತ ಮುಕೇಶ್ ಅವರು ಜಿಲ್ಲೆಯ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ಅವ್ಯವಹಾರಗಳ ಬಗ್ಗೆ ಇತ್ತೀಚಿನ ಸರಣಿ ವರದಿ ಮಾಡಿದ್ದರು. ಇದಕ್ಕೂ ಕೊಲೆಗೂ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರು ಈ ರಸ್ತೆ ನಿರ್ಮಾಣವನ್ನು ಪಡೆದುಕೊಂಡಿದ್ದಾರೆ.
ಬಿಜಾಪುರ ಸೇರಿದಂತೆ ಬಸ್ತಾರ್ ವಿಭಾಗದ ಗುತ್ತಿಗೆದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪತ್ರಕರ್ತರು ನಗರದ ರಾಷ್ಟ್ರೀಯ ಹೆದ್ದಾರಿ 36ರ ಆಸ್ಪತ್ರೆ ಚೌಕ್ನಲ್ಲಿ ಸಾಂಕೇತಿಕ ರಸ್ತೆ ತಡೆ ನಡೆಸಿದರು. ಜೊತೆಗೆ ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.( PTI)
ಇದನ್ನೂ ಓದಿ: 32 ವರ್ಷದಿಂದ ಸ್ನಾನ ಮಾಡದ ಚೋಟು ಬಾಬಾ; ತಲೆ ಮೇಲೆ ಧನವಾಲೆ ಬಾಬಾರಿಂದ ಬಾರ್ಲಿ ಕೊಯ್ಲು!