ಮಾಲೆ(ಮಾಲ್ಡೀವ್ಸ್):ಮಾಲ್ಡೀವ್ಸ್ ಸಂಸತ್ತಿನಲ್ಲಿ ಭಾನುವಾರ ನಡೆದ ವಿಶೇಷ ಅಧಿವೇಶನವು ಸಂಸದರ ಸಂಘರ್ಷಕ್ಕೆ ಕಾರಣವಾಯಿತು. ಅಧ್ಯಕ್ಷ ಮೊಹಮ್ಮದ್ ಮುಯಿಝು ಸಂಪುಟದ ನಾಲ್ವರು ಸದಸ್ಯರ ಅನುಮೋದನೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಈ ಸಂದರ್ಭದಲ್ಲಿ ಆಡಳಿತಾರೂಢ ಸರ್ಕಾರದ ಪರವಾಗಿರುವ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಘರ್ಷಣೆ ನಡೆಯಿತು.
ಅಧಿವೇಶನದಲ್ಲಿ ಇಬ್ಬರು ಸಂಸದರು ಹೊಡೆದಾಟದಲ್ಲಿ ತೊಡಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ನೋಡಬಹುದು. ಆಡಳಿತ ಪಕ್ಷಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ), ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಮತ್ತು ಪ್ರತಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿದರು.
ಮಾಲ್ಡೀವ್ಸ್ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಮುಯಿಝು ಕ್ಯಾಬಿನೆಟ್‌ನ ನಾಲ್ವರು ಸಂಸದರನ್ನು ಅನುಮೋದಿಸಲು ನಿರಾಕರಿಸಿದಾಗ ಗಲಾಟೆ ಪ್ರಾರಂಭವಾಯಿತು. ವಿರೋಧ ಪಕ್ಷದ ಸಂಸದರು, ಆಡಳಿತ ಪಕ್ಷದ ಸಂಸದರ ನಡುವೆ ಗುದ್ದಾಟ ನಡೆಯಿತು. ಕೆಲವು ಸಂಸದರು ಸ್ಪೀಕರ್ ಕೆಲಸಕ್ಕೆ ಅಡ್ಡಿಪಡಿಸಿದರು. ಇದರಿಂದಾಗಿ ಕೋಲಾಹಲವೇ ಜರುಗಿತು.
ಮುಖ್ಯ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ, ಕ್ಯಾಬಿನೆಟ್ ಮೇಲಿನ ಮತದಾನಕ್ಕೆ ಮುಂಚಿತವಾಗಿ ಮುಯಿಝು ಪಕ್ಷದ ನಾಲ್ವರು ಸದಸ್ಯರಿಗೆ ಸಂಸತ್ತಿನ ಅನುಮೋದನೆ ತಡೆಹಿಡಿಯಲು ನಿರ್ಧರಿಸಿತು. ಇದರಿಂದ ರೊಚ್ಚಿಗೆದ್ದ ಸರ್ಕಾರದ ಪರವಾಗಿರುವ ಸಂಸದರು ಪ್ರತಿಭಟನೆ ಪ್ರಾರಂಭಿಸಿದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.