ಕರ್ನಾಟಕ

karnataka

By ETV Bharat Karnataka Team

Published : Jan 20, 2024, 1:36 AM IST

ETV Bharat / international

2023ರಲ್ಲಿ 1.80 ಲಕ್ಷಕ್ಕೂ ಹೆಚ್ಚು ಭಾರತೀಯ ನಾಗರಿಕರಿಗೆ ಚೀನಾ ವೀಸಾ ವಿತರಣೆ!

2023ರಲ್ಲಿ ಭಾರತೀಯ ನಾಗರಿಕರಿಗೆ 180,000ಕ್ಕೂ ಹೆಚ್ಚು ಚೀನೀ ವೀಸಾಗಳನ್ನು ನೀಡಲಾಗಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರರು ಮಾಹಿತಿ ನೀಡಿದ್ದಾರೆ.

China visas to Indian citizens
ಭಾರತೀಯ ನಾಗರಿಕರಿಗೆ ಚೀನಾ ವೀಸಾ

ನವದೆಹಲಿ:2023ರಲ್ಲಿ ಭಾರತದ 1.80 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಚೀನಾದ ವೀಸಾಗಳನ್ನು ನೀಡಲಾಗಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಶುಕ್ರವಾರ ತಿಳಿಸಿದ್ದಾರೆ. ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯು ಕಳೆದ ವರ್ಷ ಭಾರತೀಯ ನಾಗರಿಕರು ಚೀನಾಕ್ಕೆ ಪ್ರಯಾಣಿಸಲು ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು. ಅಲ್ಲದೇ, ಚೀನಾದಿಂದ ಭಾರತಕ್ಕೆ ಬರುವ ಜನರಿಗೆ ಸಾಮಾನ್ಯ ವೀಸಾಗಳನ್ನು ಭಾರತವು ಪುನರಾರಂಭಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ನಾಗರಿಕರು ಚೀನಾದ ವೀಸಾಗಳನ್ನು ಪಡೆದಿರುವ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಮಾಹಿತಿ ಹಂಚಿಕೊಂಡಿರುವ ವಾಂಗ್ ಕ್ಸಿಯಾಜಿಯಾನ್, 2023ರಲ್ಲಿ ಭಾರತೀಯ ನಾಗರಿಕರಿಗೆ 180,000ಕ್ಕೂ ಹೆಚ್ಚು ಚೀನೀ ವೀಸಾಗಳನ್ನು ನೀಡಲಾಗಿದೆ!. ಕಳೆದ ವರ್ಷ ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ಚೀನಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಉತ್ತಮ ಅನುಕೂಲವಾಗುವಂತೆ ಕ್ರಮಗಳ ಪ್ಯಾಕೇಜ್ ನೀಡಿತ್ತು. ಉದಾಹರಣೆಗೆ ಆನ್‌ಲೈನ್ ಅಪಾಯಿಂಟ್‌ಮೆಂಟ್ ತೆಗೆದುಹಾಕಲಾಗಿತ್ತು. ಫಿಂಗರ್‌ಪ್ರಿಂಟ್‌ಗಳ ವಿನಾಯಿತಿ ಮತ್ತು ತಾತ್ಕಾಲಿಕ ಶುಲ್ಕ ಕಡಿತ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಮುಂದುವರೆದು, ಚೀನಾ ಮತ್ತು ಭಾರತದ ನಡುವೆ ಪರಸ್ಪರ ಜನರಿಂದ ಜನರಿಗೆ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಜಂಟಿಯಾಗಿ ಉತ್ತೇಜಿಸಲು ಭಾರತಕ್ಕೆ ಪ್ರಯಾಣಿಸುವ ಚೀನಾದ ನಾಗರಿಕರಿಗೆ ಭಾರತವು ಸಾಮಾನ್ಯ ವೀಸಾ ಚಾನೆಲ್‌ಗಳನ್ನು ಪುನರಾರಂಭಿಸುತ್ತದೆ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇವೆ ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.

2022ರಲ್ಲಿ ಭಾರತವು ಚೀನಾದ ಪ್ರಜೆಗಳಿಗೆ ಪ್ರವಾಸಿ ವೀಸಾವನ್ನು ಅಮಾನತುಗೊಳಿಸಿದೆ ಎಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (International Air Transport Association - IATA) ತನ್ನ ಸದಸ್ಯರಿಗೆ ಸುತ್ತೋಲೆ ಹೊರಡಿಸಿತ್ತು. ಚೀನಾ (ಪೀಪಲ್ಸ್ ರಿಪಬ್ಲಿಕ್) ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳು ಇನ್ಮುಂದೆ ಮಾನ್ಯವಾಗಿಲ್ಲ ಎಂದು ಹೇಳಿತ್ತು. ಭೂತಾನ್, ಭಾರತ, ಮಾಲ್ಡೀವ್ಸ್ ಮತ್ತು ನೇಪಾಳದ ಪ್ರಜೆಗಳು, ಭಾರತ ನೀಡಿದ ನಿವಾಸ ಪರವಾನಗಿ ಹೊಂದಿರುವ ಪ್ರಯಾಣಿಕರು ಮತ್ತು ಭಾರತದಿಂದ ನೀಡಲಾದ ವೀಸಾ ಅಥವಾ ಇ-ವೀಸಾ ಹೊಂದಿರುವ ಪ್ರಯಾಣಿಕರಿಗೆ ಭಾರತವನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ತಿಳಿಸಿತ್ತು.

ಅಲ್ಲದೇ, ಈ ಸುತ್ತೋಲೆಯ ಪ್ರಕಾರ, ಭಾರತೀಯ ಮೂಲದ ವ್ಯಕ್ತಿಗಳ (Persons of Indian Origin - PIO) ಕಾರ್ಡ್ ಹೊಂದಿರುವವರು ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವಂತಹ ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ ಅಥವಾ ಬುಕ್‌ಲೆಟ್ ಹೊಂದಿರುವ ಪ್ರಯಾಣಿಕರು ಸಹ ಭಾರತವನ್ನು ಪ್ರವೇಶಿಸಲು ಅನುಮತಿಸಲಾಗಿದೆ. 10 ವರ್ಷಗಳ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾಗಳು ಇನ್ಮುಂದೆ ಮಾನ್ಯವಾಗಿರುವುದಿಲ್ಲ ಎಂದು ವಾಯು ಸಾರಿಗೆ ಸಂಸ್ಥೆ ತಿಳಿಸಿತ್ತು.

ABOUT THE AUTHOR

...view details