ಅಡೆನ್/ಜೆರುಸಲೇಂ: ಯೆಮೆನ್ನ ಕೆಂಪು ಸಮುದ್ರದ ಬಂದರು ನಗರ ಹೊದೈದಾ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 49 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಹೌತಿ ನೇತೃತ್ವದ ಅಲ್-ಮಸಿರಾ ಟಿವಿ ಭಾನುವಾರ ಈ ದಾಳಿಯನ್ನು "ಇಸ್ರೇಲಿ ಆಕ್ರಮಣ" ಎಂದು ಬಣ್ಣಿಸಿದೆ.
ರಾಸ್ ಇಸಾ ಪ್ರದೇಶದ ಬಂದರು ಮತ್ತು ಅಲ್-ಹಾಲಿ ಮತ್ತು ಅಲ್-ಕತೀಬ್ ಜಿಲ್ಲೆಗಳ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಅಲ್-ಹಾಲಿ ವಿದ್ಯುತ್ ಸ್ಥಾವರದಲ್ಲಿ ಓರ್ವ ಬಂದರು ಕಾರ್ಮಿಕ ಮತ್ತು ಮೂವರು ಎಂಜಿನಿಯರ್ಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ, ಇತರ 49 ಜನರು ಗಾಯಗೊಂಡಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ" ಎಂದು ಅಲ್-ಮಸಿರಾ ಟೆಲಿವಿಷನ್ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ಹೌತಿಗಳು ತಮ್ಮ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸರಕುಗಳನ್ನು ಸಾಗಿಸಲು ಬಳಸುತ್ತಿದ್ದ ಹೊದೈದಾ ಬಂದರು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಭಾನುವಾರ ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಇಸ್ರೇಲ್ನಿಂದ ಸುಮಾರು 1,800 ಕಿ.ಮೀ ದೂರದಲ್ಲಿರುವ ಯೆಮೆನ್ನಲ್ಲಿ ಹೌತಿ ನೆಲೆಗಳ ಮೇಲೆ ಯುದ್ಧ ವಿಮಾನಗಳು, ಮಾರ್ಗಮಧ್ಯೆ ಇಂಧನ ತುಂಬುವ ವಿಮಾನಗಳು ಮತ್ತು ಗುಪ್ತಚರ ವಿಮಾನಗಳು ಸೇರಿದಂತೆ ಡಜನ್ಗಟ್ಟಲೆ ವಿಮಾನಗಳ ಮೂಲಕ ದಾಳಿ ನಡೆದಿದೆ.
ಕೆಂಪು ಸಮುದ್ರದ ಕರಾವಳಿಯುದ್ದಕ್ಕೂ ತೈಲ ಟ್ಯಾಂಕ್ಗಳು, ವಿಮಾನ ನಿಲ್ದಾಣ ಮತ್ತು ಇತರ ಬಂದರು ಸೌಲಭ್ಯಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ 10 ಕ್ಕೂ ಹೆಚ್ಚು ವೈಮಾನಿಕ ದಾಳಿಗಳು ನಡೆದಿವೆ ಎಂದು ಹೆಸರು ಹೇಳಲಿಚ್ಛಿಸದ ಯೆಮೆನ್ ಪರ ಅಧಿಕಾರಿಯೊಬ್ಬರು ಕ್ಸಿನ್ಹುವಾಗೆ ತಿಳಿಸಿದ್ದಾರೆ.
ಯೆಮೆನ್ ಇತ್ತೀಚೆಗೆ ಮಧ್ಯ ಇಸ್ರೇಲ್ ಕಡೆಗೆ ಎರಡು ಕ್ಷಿಪಣಿಗಳನ್ನು ಉಡಾಯಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಯೆಮೆನ್ ಕಡೆಯಿಂದ ಬಂದ ಕ್ಷಿಪಣಿಗಳ ಪೈಕಿ ಒಂದನ್ನು ಟೆಲ್ ಅವೀವ್ನ ಜಾಫಾ ಪ್ರದೇಶದ ಮಿಲಿಟರಿ ನೆಲೆ ಮತ್ತು ಇನ್ನೊಂದು ಟೆಲ್ ಅವೀವ್ ಬಳಿಯ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹಾರಿಸಲಾಗಿತ್ತು. ಆದರೆ ಎರಡೂ ಕ್ಷಿಪಣಿಗಳನ್ನು ಇಸ್ರೇಲ್ನ ವೈಮಾನಿಕ ರಕ್ಷಣಾ ಪಡೆಗಳು ಗಾಳಿಯಲ್ಲಿಯೇ ಹೊಡೆದುರುಳಿಸಿದ್ದವು.
ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕ ಹತ: ಇಸ್ರೇಲ್ - Israel killed Hezbollah official