ಬೆಂಗಳೂರು: ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮುಕ್ತ ತನಿಖೆಗೆ ಏಳು ರಾಜ್ಯಗಳಲ್ಲಿ ಅವಕಾಶ ಇಲ್ಲ. ಇದೀಗ ಇದಕ್ಕೆ ಕರ್ನಾಟಕವೂ ಸೇರ್ಪಡೆಯಾಗಿದೆ. ಸಿಬಿಐ ತನಿಖೆಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ಕಳೆದ ಗುರುವಾರ ಕರ್ನಾಟಕ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು. ಈ ಹಿಂದೆ ಮುಕ್ತ ತನಿಖೆ ನಡೆಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946ರ ಸೆಕ್ಷನ್ 6ರ ಪ್ರಕಾರ, ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆಗಳನ್ನು ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕಾಗಿದೆ. ಅಪರಾಧ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡಲು ಅನುವು ಮಾಡಿಕೊಡುವ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946ರ ಅಡಿಯಲ್ಲಿನ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಸಚಿವ ಸಂಪುಟ ಸಭೆ ನಂತರ ತಿಳಿಸಿದ್ದರು.
ನಾವು ಸಿಬಿಐಗೆ ವಹಿಸಿದ್ದ ಎಲ್ಲ ಪ್ರಕರಣಗಳಲ್ಲಿ ಅವರು ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆ ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಸೂಚನೆ ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಪ್ರತಿ ಪ್ರಕರಣವನ್ನು ಪರಿಶೀಲಿಸಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಈ ಹಿಂದೆ ರಾಜ್ಯದಲ್ಲಿ ಜೆ.ಎಚ್.ಪಟೇಲ್ ಸರ್ಕಾರ 1998ರಲ್ಲಿ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿತ್ತು. ಅದಾದ ಬಳಿಕ ಬಹಳಷ್ಟು ವರ್ಷ ಸಿಐಬಿಗೆ ಮುಕ್ತ ಅವಕಾಶ ನೀಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೆ ಅವಕಾಶ ನೀಡಲಾಗಿತ್ತು.
ಇನ್ನು ಇತರ ರಾಜ್ಯಗಳ ಬಗ್ಗೆ ನೋಡುವುದಾದರೆ ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮೇಘಾಲಯ ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ವಾಪಸ್ ಪಡೆದಿವೆ. ಮೇಘಾಲಯ ಹೊರತುಪಡಿಸಿ, ಉಳಿದ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವುದನ್ನು ಗಮನಿಸಬಹುದು. ಆಯಾ ರಾಜ್ಯ ಸರ್ಕಾರಗಳ ಅನುಮತಿ ಪಡೆದು ಸಿಬಿಐ ತನಿಖೆಗೆ ಮುಂದಾಗಬೇಕಿದೆ.
ಆಂಧ್ರ ಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಮಿಜೋರಾಂ ರಾಜ್ಯಗಳು ಕೂಡ ಈ ಹಿಂದೆ ಒಪ್ಪಿಗೆ ಹಿಂಪಡೆದಿದ್ದವು. ಆದರೆ, ಸರ್ಕಾರದ ಬದಲಾವಣೆಯ ನಂತರ ಮರುಸ್ಥಾಪನೆ ಮಾಡಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಬಿಐಯನ್ನು ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಮಾಡಿ ಪ್ರತಿಪಕ್ಷಗಳ ನಾಯಕರನ್ನು ಹಣಿಯುತ್ತಿದೆ ಎಂಬ ಆರೋಪ ಮಾಡಿ ಮುಕ್ತ ಅವಕಾಶ ಹಿಂಪಡೆದಿವೆ ಎಂದು ಹೇಳಲಾಗುತ್ತಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2015ರಲ್ಲಿ ಮಿಜೋರಾಂ ಸಿಬಿಐ ತನಿಖೆಯ ಮುಕ್ತ ಅವಕಾಶ ಹಿಂಪಡೆದಿತ್ತು. 2018ರಲ್ಲಿ ಪಶ್ಚಿಮ ಬಂಗಾಳ, 2019ರಲ್ಲಿ ಆಂಧ್ರ ಪ್ರದೇಶ ಮತ್ತು ಛತ್ತೀಸ್ಗಢ, 2020ರಲ್ಲಿ ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ ಹಾಗೂ 2022ರಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರ ಸಾಮಾನ್ಯ ಒಪ್ಪಿಗೆ ಹಿಂಪಡೆದಿದ್ದವು. ಆದರೆ, ಕೆಲ ರಾಜ್ಯಗಳು ಹಿಂದಕ್ಕೆ ಸರಿದಿವೆ. ಆದರೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶ ಮಾಡಿದರೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕಾಗಿಲ್ಲ. ದೆಹಲಿ ವಿಶೇಷ ಪೊಲೀಸ್ ಕಾಯ್ದೆಯಡಿ ರಚನೆಯಾಗಿರುವ ಸಿಬಿಐ ದೇಶಾದ್ಯಂತ ತನ್ನ ವ್ಯಾಪ್ತಿ ಹೊಂದಿದೆ.
"ಭ್ರಷ್ಟಾಚಾರದ ಮುಖವಾಡ ಹೊರಬೀಳುವ ಭಯದಿಂದ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಮಾಡಿದ್ದಾರೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ" ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.