ಕಠ್ಮಂಡು: ನೇಪಾಳದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 200ಕ್ಕೆ ತಲುಪಿದೆ. ಸೋಮವಾರ ಸತತ ಮೂರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕನಿಷ್ಠ 30 ಜನರು ನಾಪತ್ತೆಯಾಗಿದ್ದಾರೆ.
ಕಳೆದ ಶುಕ್ರವಾರದಿಂದ ನಿರಂತರ ಮಳೆಯ ಪರಿಣಾಮ ಪ್ರವಾಹ ಮತ್ತು ಭೂಕುಸಿತ ಸಂಭವಿಸುತ್ತಿದ್ದು, ಹಿಮಾಲಯ ರಾಷ್ಟ್ರದಲ್ಲಿ ಭಾರಿ ವಿನಾಶವನ್ನುಂಟು ಮಾಡಿದೆ. ಸತತ ಮಳೆ, ಪ್ರವಾಹ, ಭೂಕುಸಿತದಿಂದ ಕನಿಷ್ಠ 192 ಜನರು ಮೃತಪಟ್ಟ ಮಾಹಿತಿ ಇದೆ. ದುರಂತದಲ್ಲಿ 194 ಮಂದಿ ಗಾಯಗೊಂಡಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ. ವಿವಿಧ ಸ್ಥಳಗಳಿಂದ 4,500 ಜನರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗೆ ಆಹಾರ ಮತ್ತು ಇತರ ತುರ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಸಿಂಘಾ ದರ್ಬಾರ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ಪ್ರಕಾಶ್ ಮಾನ್ ಸಿಂಗ್ ಅವರು ಸರ್ವಪಕ್ಷ ಸಭೆ ಕರೆದಿದ್ದರು. ಈ ಸಭೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣಕ್ಕೆ ಮೊದಲ ಕಂತಿನ ಅನುದಾನ ನೀಡಲು ನಿರ್ಧರಿಸಲಾಯಿತು.
ದೇಶದ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಹೆದ್ದಾರಿಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ನೂರಾರು ಮನೆಗಳು ಮತ್ತು ಸೇತುವೆಗಳನ್ನು ಮಳೆ ನೀರು ಸುತ್ತುವರೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವ್ಯವಸ್ಥೆಯಿಂದ ಸಾವಿರಾರು ಜನರು ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಪ್ರವಾಹ, ಭೂಕುಸಿತಕ್ಕೆ ನೇಪಾಳ ತತ್ತರ: 100ರ ಗಡಿ ದಾಟಿದ ಸಾವಿನ ಸಂಖ್ಯೆ - Nepal Floods