ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನವಿರಾಮ ಒಪ್ಪಂದವಾಗಿದ್ದು, ಇದು ಭಾನುವಾರದಿಂದ ಜಾರಿಯಾಗಿದೆ. ಬೈಡನ್ ಅಮೆರಿಕ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿರುವ ಮಧ್ಯೆ ತಿಂಗಳುಗಳ ಕಾಲ ನಡೆದ ಸಮಗ್ರ ಮಾತುಕತೆಗಳ ನಂತರ ಈ ಒಪ್ಪಂದ ಜಾರಿಯಾಗುತ್ತಿರುವುದು ಗಮನಾರ್ಹ. ಬೈಡನ್ ಮತ್ತು ಟ್ರಂಪ್ ಇಬ್ಬರೂ ಕದನ ವಿರಾಮದ ಶ್ರೇಯಸ್ಸು ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ನವೆಂಬರ್ನಲ್ಲಿ ನಮ್ಮ ಪಕ್ಷಕ್ಕೆ ಐತಿಹಾಸಿಕ ಗೆಲುವು ಸಿಕ್ಕಿದ್ದರಿಂದಲೇ ಕದನ ವಿರಾಮ ಒಪ್ಪಂದ ಜಾರಿಯಾಗಲು ಸಾಧ್ಯವಾಗಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ನಾವಿನ್ನೂ ಶ್ವೇತಭವನಕ್ಕೆ ಬರುವ ಮುನ್ನವೇ ಇದನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಬೈಡನ್, ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದೇವೆ, ಏಕೆಂದರೆ ಅಮೆರಿಕದ ಯಾವುದೇ ಅಧ್ಯಕ್ಷರು ಅದನ್ನೇ ಮಾಡುತ್ತಾರೆ ಎಂದು ಹೇಳಿದ್ದಾರೆ.
ಕೊನೆಗೂ ಯುದ್ಧ ಅಂತ್ಯವಾಗಿದ್ದಕ್ಕೆ ಗಾಜಾ ಜನತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಹಮಾಸ್ನ ಹಿರಿಯ ನಾಯಕ ಮತ್ತು ಮಧ್ಯಸ್ಥಿಕೆ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಲೀಲ್ ಅಲ್ - ಹಯ್ಯಾ, 'ನಮ್ಮ ಜನರು ಆಕ್ರಮಣದ ಘೋಷಿತ ಮತ್ತು ಗುಪ್ತ ಗುರಿಗಳನ್ನು ವಿಫಲಗೊಳಿಸಿದ್ದಾರೆ. ಆಕ್ರಮಣವು ನಮ್ಮ ಜನರನ್ನು ಮತ್ತು ಅವರ ಪ್ರತಿರೋಧವನ್ನು ಎಂದಿಗೂ ಮಣಿಸಲಾಗದು ಎಂಬುದನ್ನು ಇಂದು ನಾವು ಸಾಬೀತುಪಡಿಸಿದ್ದೇವೆ.' ಎಂದರು.
ಏತನ್ಮಧ್ಯೆ, ತನ್ನ ಗುಂಪಿಗೆ ಹೊಸದಾಗಿ ಸದಸ್ಯರನ್ನು ನೇಮಿಸಿಕೊಳ್ಳುವ ಮೂಲಕ ಹಮಾಸ್ ಆಕ್ರಮಣದ ಮೊದಲು ಇದ್ದ ತನ್ನ ಶಕ್ತಿಯನ್ನು ಮರಳಿ ಸ್ಥಾಪಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದು ವಿನಾಶ ಮತ್ತು ನಷ್ಟಗಳ ಹೊರತಾಗಿಯೂ ಅದರ ಸಿದ್ಧಾಂತ ಮತ್ತು ಜನಪ್ರಿಯತೆ ಮೊದಲಿನಂತೆಯೇ ಉಳಿದುಕೊಂಡಿವೆ ಎಂಬುದರ ಸಂಕೇತವಾಗಿದೆ.
ಗಾಜಾ ಜನತೆ ಕದನ ವಿರಾಮ ಸಂಭ್ರಮಿಸ್ತಿದ್ದಾರೆ.. ಆದರೆ?:ಯುದ್ಧದ ಸಮಯದಲ್ಲಿ ಗಾಜಾ ಜನತೆ ತಮ್ಮ ಮನೆಗಳು ಮತ್ತು ಆಸ್ಪತ್ರೆಗಳ ನಾಶದ ಬಗ್ಗೆ ಜಗತ್ತಿನ ಮುಂದೆ ಕಿರುಚಾಡಿದ್ದರು. ತಮ್ಮ ನಲವತ್ತು ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದ್ದರು. ಇಸ್ರೇಲಿ ಆಕ್ರಮಣವನ್ನು ನರಮೇಧ ಎಂದು ಕರೆದ ಅವರು ಹಸಿವಿನಿಂದ ಬಳಲುತ್ತಿರುವ ಮತ್ತು ಸಾಯುತ್ತಿರುವ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸಿದ್ದರು. ಆದರೆ, ಈಗ ಅದೇ ಗಾಜಾ ಜನತೆ ಕದನ ವಿರಾಮವನ್ನು ತಮ್ಮ ವಿಜಯವೆಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದು ವಿಪರ್ಯಾಸವೇ ಅಥವಾ ಅವರು ಬ್ರೈನ್ ವಾಶ್ಗೆ ಒಳಗಾಗಿದ್ದಾರಾ ಎಂಬುದು ತಿಳಿಯುತ್ತಿಲ್ಲ.
ಗಾಝಾದಲ್ಲಿ ಹಮಾಸ್ ತನ್ನ ಜನರಿಗೆ ಊಹಿಸಲಾಗದ ಯಾತನೆಯನ್ನು ಉಂಟುಮಾಡಿದರೂ ಅದು ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಹಮಾಸ್ನಿಂದಾಗಿ ಗಾಜಾ ಜನತೆ ಆಹಾರ ಮತ್ತು ಔಷಧಗಳಿಗಾಗಿ ಪರಿತಪಿವಂತಾಯಿತು. ಯಾವುದೇ ಯಾವುದೇ ಕಾರ್ಯತಂತ್ರದ ಲೆಕ್ಕಾಚಾರಗಳಿಲ್ಲದೇ ಪ್ರಾರಂಭಿಸಿದ ಯುದ್ಧದಲ್ಲಿ ಜನ ಒಂದು ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ಓಡಬೇಕಾಯಿತು. ಇನ್ನು ಇಸ್ರೇಲಿ ದಾಳಿಗಳಿಂದ ಹಮಾಸ್ ತನ್ನ ಸಂಪೂರ್ಣ ನಾಯಕತ್ವವನ್ನು ಕಳೆದುಕೊಂಡಿತು. ಆದಾಗ್ಯೂ, ಭಯೋತ್ಪಾದಕ ಸಂಘಟನೆಗಳಲ್ಲಿ ನಾಯಕನೊಬ್ಬ ಹತನಾದರೆ ಆ ಸ್ಥಾನಕ್ಕೆ ಮತ್ತೊಬ್ಬ ಬರುವುದು ಅತ್ಯಂತ ಸುಲಭ.
ಸಾಮಾನ್ಯ ಇಸ್ರೇಲಿ ಜನ ಕದನ ವಿರಾಮ ಒಪ್ಪಂದದ ಬಗ್ಗೆ ಖುಷಿ ಪಟ್ಟಿದ್ದು, ಒತ್ತೆಯಾಳುಗಳ ಕುಟುಂಬಸ್ಥರು ತಮ್ಮವರು ಮರಳಿ ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಕದನ ವಿರಾಮ ಒಪ್ಪಂದಿಂದ ಇಸ್ರೇಲ್ ಸರ್ಕಾರದೊಳಗೆ ಅಸಮಾಧಾನ ಸೃಷ್ಟಿಯಾಗಿದೆ. ಸೈನಿಕರ ಕುಟುಂಬಗಳು ಸಹ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹೋರಾಟದಲ್ಲಿ ಇಸ್ರೇಲ್ ಈವರೆಗೆ 400 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಹಾಗೂ ಅನೇಕರು ಗಾಯಗೊಂಡಿದ್ದಾರೆ.
ಕದನ ವಿರಾಮ ವಿರೋಧಿಸಿ ಇಬ್ಬರು ಇಸ್ರೇಲಿ ಸಚಿವರ ರಾಜೀನಾಮೆ:ಇಸ್ರೇಲ್ನ ತೀವ್ರಗಾಮಿ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಮತ್ತು ಧಾರ್ಮಿಕ ಯಹೂದಿ ಪವರ್ ಪಕ್ಷದ ಇತರ ಇಬ್ಬರು ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪ್ರಸ್ತುತ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದಿಲ್ಲ ಅಥವಾ ಕದನ ವಿರಾಮದ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಇದು ಆಡಳಿತಾರೂಢ ಮೈತ್ರಿಕೂಟವನ್ನು ಅಸ್ಥಿರಗೊಳಿಸಿದೆ.
ನೆತನ್ಯಾಹು ತಮ್ಮ ರಾಜಕೀಯ ಲಾಭಕ್ಕಾಗಿ ಕದನ ವಿರಾಮ ಒಪ್ಪಂದಕ್ಕೆ ಬರಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಕದನ ವಿರಾಮ ಒಪ್ಪಂದ ಜಾರಿಯಾದರೆ ತಮ್ಮ ಅಧಿಕಾರಕ್ಕೆ ಕುತ್ತು ಬರಬಹುದು ಎಂಬ ಆತಂಕ ಇದಕ್ಕೆ ಕಾರಣ ಎನ್ನಲಾಗಿದೆ. ಕದನ ವಿರಾಮದ ಮೊದಲ ಹಂತದ ನಂತರ ಮತ್ತೆ ಯುದ್ಧ ಆರಂಭಿಸಬೇಕಾ ಎಂಬ ಬಗ್ಗೆ ಪರಿಶೀಲಿಸಲು ನೆತನ್ಯಾಹು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕದನ ವಿರಾಮದ ಮೊದಲ ಹಂತದಲ್ಲಿ 33 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯ ಪ್ರಸ್ತಾಪವಿದೆ.
ಕದನ ವಿರಾಮವು ಹಮಾಸ್ನ ಸಿದ್ಧಾಂತವನ್ನು ಸೋಲಿಸಲು ಇಸ್ರೇಲ್ಗೆ ಸಾಧ್ಯವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇಸ್ರೇಲ್ ಹಮಾಸ್ನ ಮಿಲಿಟರಿ ವ್ಯವಸ್ಥೆಯನ್ನು ಹಾಳು ಮಾಡಿದ ನಂತರ ಈಗ ಅದು ದಂಗೆಕೋರ ಶಕ್ತಿಯಾಗಿ ಮಾರ್ಪಟ್ಟಿದೆ. ಈಗಲೂ ಅದು ಇಸ್ರೇಲಿ ಸೈನ್ಯದ ಮೇಲೆ ದಾಳಿ ನಡೆಸುತ್ತಿದೆ. ಕಳೆದ ಒಂದು ವಾರದಲ್ಲಿ ಇಸ್ರೇಲ್ 16 ಸೈನಿಕರನ್ನು ಕಳೆದುಕೊಂಡಿರುವುದು ಗಮನಾರ್ಹ. ಗಾಜಾದಿಂದ ಹಮಾಸ್ ಅನ್ನು ತೆಗೆದುಹಾಕುವುದು ಸುಲಭವಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಹಮಾಸ್ ಈಗಲೂ ಅಸ್ತಿತ್ವದಲ್ಲಿದೆ ಮತ್ತು ಒಂದು ಶಕ್ತಿಯಾಗಿ ಉಳಿದಿದೆ ಎಂಬುದು ಸತ್ಯ.