ಮಜತ್ಲಾನ್(ಮೆಕ್ಸಿಕೋ ಸಿಟಿ): ಪ್ರಯಾಣಿಕರಿದ್ದ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 19 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಮೆಕ್ಸಿಕೋದಲ್ಲಿ ಮಂಗಳವಾರ ನಡೆದಿದೆ. ಸುಮಾರು 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿ 37 ಮಂದಿ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪೆಸಿಫಿಕ್ ಕರಾವಳಿ ರಾಜ್ಯದ ಸಿನಾಲೋವಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇದು ಬಂದರು ನಗರ ಮಜತ್ಲಾನ್ ಬಳಿಯ ಎಲೋಟಾ ಟೌನ್‌ಶಿಪ್ ವ್ಯಾಪ್ತಿಯಲ್ಲಿದೆ ಎಂದು ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ನಿರ್ದೇಶಕ ರಾಯ್ ನವರೆಟೆ ಮಾಹಿತಿ ನೀಡಿದ್ದಾರೆ.
ಟ್ರಕ್, ಬಸ್ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ಬಸ್‌ನಲ್ಲಿದ್ದವರ ಪೈಕಿ 19 ಮಂದಿ ಸಜೀವ ದಹನವಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಕೆಲವು ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೊರ ಓಡಿ ಬಂದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಕೆಲವರು ಮತ್ತು ಸ್ಥಳದಲ್ಲೇ ಸಾವನ್ನಪ್ಪಿದ್ದ ಪ್ರಯಾಣಿಕರ ದೇಹಗಳು ಸುಟ್ಟು ಕರಕಲಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ. ಬಸ್ ಮತ್ತು ಟ್ರಕ್ ಸುಟ್ಟು ಕರಕಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ನಕ್ಸಲೀಯರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮ: 14ಕ್ಕೂ ಹೆಚ್ಚು ಸೈನಿಕರಿಗೆ ಗಾಯ