ಚಿಕಾಗೊ: ಪೆನ್ಸಿಲ್ವೇನಿಯಾದಲ್ಲಿನ ಚುನಾವಣಾ ರ‍್ಯಾಲಿ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘಟನೆ ಕುರಿತಂತೆ ಪ್ರತಿಕ್ರಿಯಿಸಿ ನೀಡಿದ್ದಾರೆ. ''ಗುಂಡಿನ ದಾಳಿಯಲ್ಲಿ ತಮ್ಮ ಬಲ ಕಿವಿಯ ಮೇಲ್ಭಾಗಕ್ಕೆ ಬುಲೆಟ್ ತಗುಲಿದೆ'' ಎಂದು ಸಾಮಾಜಿಕ ಜಾಲತಾಣ 'ಟ್ರೂತ್ ಸೋಶಿಯಲ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ. ''ಜೀವ ಉಳಿಸಿದ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ'' ಎಂದು ಅವರು ತಿಳಿಸಿದ್ದಾರೆ.
ಟ್ರಂಪ್ ಮೊದಲ ಪ್ರತಿಕ್ರಿಯೆ:"ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿನ ಚುನಾವಣಾ ರ‍್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ವೇಳೆ ತ್ವರಿತವಾಗಿ ಎಚ್ಚೆತ್ತುಕೊಂಡ ಅಮೆರಿಕ ಭದ್ರತಾ ಪಡೆಯ ಸಿಬ್ಬಂದಿಗೆ ಧನ್ಯವಾದಗಳು. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಹಾಗೂ ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರ ಕುಟುಂಬಕ್ಕೆ ನನ್ನ ಸಂತಾಪವಿದೆ. ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುತ್ತಿದೆ ಎಂದರೆ ನಂಬಲಸಾಧ್ಯವಾಗಿದೆ. ಶೂಟರ್ ಯಾರೆಂದು ಪ್ರಸ್ತುತ ತಿಳಿದಿಲ್ಲ. ಗುಂಡು ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ತಗುಲಿದೆ. ಮೊದಲು ಗುಂಡಿನ ಸದ್ದು ಕೇಳಿದಾಗ ಏನೋ ನಡೆಯುತ್ತಿದೆ ಎಂದು ತಿಳಿಯಿತು. ಆಗ ಗಮನಿಸಿದಾಗ ನನ್ನ ಕಿವಿಗೆ ಗುಂಡು ತಗುಲಿ ತುಂಬಾ ರಕ್ತಸ್ರಾವ ಆಗುತ್ತಿರುವುದು ಗೊತ್ತಾಯಿತು. ಆಗ ಸ್ಥಳದಲ್ಲಿ ಏನಾಗುತ್ತಿದೆ ಎಂದು ನಾನು ಅರಿತುಕೊಂಡೆ. ದೇವರ ಆಶೀರ್ವಾದವಿರಲಿ ಅಮೆರಿಕ!'' ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಸದ್ಯ ಟ್ರಂಪ್ ಸುರಕ್ಷಿತವಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.