ಟೆಲ್ ಅವೀವ್: ಬ್ರೆಜಿಲ್ ಅಧ್ಯಕ್ಷ ಲೂಲಾ ಡ ಸಿಲ್ವಾ, ಗಾಜಾದಲ್ಲಿ ಹಮಾಸ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಅಡಾಲ್ಫ್ ಹಿಟ್ಲರ್ ಯಹೂದಿಗಳ ವಿರುದ್ಧ ನಡೆಸಿದ 'ಹತ್ಯಾಕಾಂಡ'ಕ್ಕೆ ಹೋಲಿಸಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಪ್ಯಾಲೆಸ್ಟೀನಿಯನ್ ಜನರ ವಿರುದ್ಧದ 'ಹತ್ಯಾಕಾಂಡ'ವಾಗಿದೆ. ಇಸ್ರೇಲ್ ಪ್ಯಾಲೆಸ್ಟೀನಿಯನ್ ನಾಗರಿಕರ ವಿರುದ್ಧ 'ಜನಾಂಗೀಯ ಹತ್ಯೆ' ಮಾಡುತ್ತಿದೆ ಎಂದು ಲೂಲಾ ಹೇಳಿದ್ದಾರೆ.
ಆಫ್ರಿಕನ್ ಯೂನಿಯನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಅಡಿಸ್ ಅಬಾಬಾದಲ್ಲಿ ಸುದ್ದಿಗಾರ ಜೊತೆ ಲೂಲಾ ಈ ಹೇಳಿಕೆಗಳನ್ನು ನೀಡಿದ್ದಾರೆ. "ಇಂತಹ ಕ್ರೌರ್ಯ, ಹಿಟ್ಲರ್ ಯಹೂದಿಗಳನ್ನು ಕೊಂದ ಘಟನೆ ಹೊರತು ಪಡಿಸಿ ಇಂತಹ ಘಟನೆ ಇತಿಹಾಸದಲ್ಲಿ ಬೇರೆ ಎಲ್ಲಿಯೂ ಆಗಿಲ್ಲ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವುದು ಯುದ್ಧವಲ್ಲ. ಇದು ನರಮೇಧ. ಇದು ಸೈನಿಕರ ವಿರುದ್ಧ ಸೈನಿಕರ ಯುದ್ಧವಲ್ಲ. ಇದು ಅತ್ಯಂತ ಸನ್ನದ್ಧ ಸೇನೆ ಮತ್ತು ಮಹಿಳೆಯರು ಹಾಗೂ ಮಕ್ಕಳ ನಡುವಿನ ಯುದ್ಧವಾಗಿದೆ" ಎಂದು ಆರೋಪಿಸಿದ್ದಾರೆ.
ಲೂಲಾ ಅವರ ಹೇಳಿಕೆಗಳಿಗೆ ಇಸ್ರೇಲ್ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು 'ನಾಚಿಕೆಗೇಡು' ಎಂದು ಕರೆದಿದೆ. ಜೊತೆಗೆ ದೇಶದ ರಾಯಭಾರಿಯನ್ನು 'ಕಠಿಣ ವಾಗ್ದಂಡನೆ'ಗಾಗಿ ಒಳಪಡಿಸಲಾಗುವುದು ಎಂದು ಹೇಳಿದೆ. ಬ್ರೆಜಿಲ್ ನಾಯಕ 'ಕೆಂಪು ಗೆರೆಯನ್ನು ದಾಟಿದ್ದಾರೆ' ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. "ಬ್ರೆಜಿಲ್ ಅಧ್ಯಕ್ಷರ ಮಾತುಗಳು ನಾಚಿಕೆಗೇಡಿನ ಹಾಗೂ ಆತಂಕಕಾರಿಯಾಗಿವೆ" ಎಂದು ಹೇಳಿದ್ದಾರೆ.
ಬ್ರೆಜಿಲ್ ಅಧ್ಯಕ್ಷರ ಈ ಮಾತು, ಯಹೂದಿ ಜನರಿಗೆ ಮತ್ತು ಇಸ್ರೇಲ್ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹಾನಿ ಮಾಡುವ ಪ್ರಯತ್ನವಾಗಿದೆ. ಇಸ್ರೇಲ್ ತನ್ನ ರಕ್ಷಣೆಗಾಗಿ ಹೋರಾಡುತ್ತಿದೆ. ಸಂಪೂರ್ಣ ವಿಜಯ ಸಾಧಿಸುವವರೆಗೆ ತನ್ನ ಭವಿಷ್ಯವನ್ನು ಭದ್ರ ಪಡಿಸುತ್ತಿದೆ. ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿಯುತ್ತದೆ." ಎಂದು ಬ್ರೆಜಿಲ್ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.