ಕರ್ನಾಟಕ

karnataka

ETV Bharat / international

ಬಾಂಗ್ಲಾ ಮಧ್ಯಂತರ ಸರ್ಕಾರ ಮುಖ್ಯಸ್ಥರಾಗಿ ಯೂನಸ್​ ಪ್ರಮಾಣ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್​ ಸ್ವಾಗತ - Blinken welcomes Yunus sworn in

ಪ್ರಮಾಣವಚನ ನಂತರ ಮುಹಮ್ಮದ್ ಯೂನಸ್ ಅವರ ಶಾಂತಿಯ ಕರೆಯನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್ ಹೇಳಿದ್ದಾರೆ.

Muhammad Yunus and Tony Blinken
ಮುಹಮ್ಮದ್ ಯೂನಸ್ ಹಾಗೂ ಟೋನಿ ಬ್ಲಿಂಕನ್​ (AP and ANI)

By PTI

Published : Aug 10, 2024, 7:38 AM IST

ವಾಷಿಂಗ್ಟನ್​: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹಠಾತ್ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಮುನ್ನಡೆಸಲು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿರುವುದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್ ಶುಕ್ರವಾರ ಸ್ವಾಗತಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬ್ಲಿಂಕನ್​, "ಪ್ರಮಾಣವಚನದ ಬಳಿಕ ಮುಮಹಮ್ಮದ್​ ಯೂನಸ್​ ಅವರು ನೀಡಿರುವ ಶಾಂತಿಯ ಕರೆಯನ್ನು ಅಮೆರಿಕ ಬೆಂಬಲಿಸುತ್ತದೆ. ಬಾಂಗ್ಲಾದೇಶದ ಜನರಿಗೆ ಪ್ರಜಾಪ್ರಭುತ್ವ ಮತ್ತು ಸಮೃದ್ಧ ಭವಿಷ್ಯವನ್ನು ರೂಪಿಸುವ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ನಿರ್ಧಾರದೊಂದಿಗೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ " ಎಂದು ಅವರು ಹೇಳಿಕೊಂಡಿದ್ದಾರೆ.

"ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲು ಡಾ. ಮುಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿರುವುದನ್ನು ನಾನು ಸ್ವಾಗತಿಸುತ್ತೇನೆ" ಎಂದು ಅವರು ಹೇಳಿದರು.

ಇದರ ಮಧ್ಯೆ, ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರಕ್ಕೆ ಕಾರಣವಾದ ಹಿಂದಿನ ಸರ್ಕಾರದ ಅಧಿಕಾರಿಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸಲು ಆರು ಶಾಸಕರು ಅಮೆರಿಕ ಖಜಾನೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

"ಈಗ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವನ್ನು ಮುನ್ನಡೆಸುತ್ತಿರುವ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು, ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸುವಂತೆ ವಿಶ್ವ ನಾಯಕರಿಗೆ ತುರ್ತಾಗಿ ಕರೆ ನೀಡಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಇಕ್ಬಾಲ್ ಕರೀಂ ಭುಯಾನ್ ಅವರು, ಸರ್ಕಾರ ತನ್ನ ಸಶಸ್ತ್ರ ಪಡೆಗಳನ್ನು ಹಿಂಸಾತ್ಮಕ ಅಭಿಯಾನದಲ್ಲಿ ತೊಡಗಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದೆಡೆ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದರೆ, ಇನ್ನೊಂದೆಡೆ ಅವಾಮಿ ಲೀಗ್‌ನ ಹಿರಿಯ ನಾಯಕರು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಗಾಗಿ ಯಾವುದೇ ಶಿಕ್ಷೆಗಳನ್ನು ಎದುರಿಸಲಿಲ್ಲ" ಎಂದು ಶಾಸಕರು ಬರೆದಿದ್ದಾರೆ.

'ಬಾಂಗ್ಲಾದೇಶದ ರಾಪಿಡ್ ಆಕ್ಷನ್ ಬೆಟಾಲಿಯನ್ ಮೇಲಿನ ಅಮೆರಿಕ ನಿರ್ಬಂಧಗಳು ಕಾನೂನುಬಾಹಿರ ಹತ್ಯೆಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಅವು ಸಾಕಾಗುವುದಿಲ್ಲ. ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್ ಮತ್ತು ಗೃಹ ಸಚಿವ ಅಸಾದುಝಮಾನ್ ಖಾನ್ ಮೇಲೆ ಉದ್ದೇಶಿತ ನಿರ್ಬಂಧಗಳನ್ನು ವಿಧಿಸಲು ಅನ್ವಯವಾಗುವ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ಅವಾಮಿ ಲೀಗ್‌ನ ಉಲ್ಲಂಘನೆಗಳಿಗೆ ಬಲವಾಗಿ ಪ್ರತಿಕ್ರಿಯಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯ ವಿರುದ್ಧ ಕ್ರಮದ ಅಗತ್ಯವಿದೆ" ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್​ ಯೆಲೆನ್‌ಗೆ ಬರೆದಿದ್ದಾರೆ.

ಮುಹಮ್ಮರ್​ ಯೂನಸ್ ಅವರು ಗುರುವಾರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಉದ್ಯೋಗಗಳಲ್ಲಿ ವಿವಾದಾತ್ಮಕ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ಶೇಖ್​ ಹಸೀನಾ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ:ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನುಸ್​ ಪ್ರಮಾಣ; ಶುಭ ಕೋರಿದ ಪ್ರಧಾನಿ ಮೋದಿ - Muhammad Yunus

ABOUT THE AUTHOR

...view details