ಹ್ಯೂಸ್ಟನ್: ಪೂರ್ವ ಟೆಕ್ಸಾಸ್ನ ಗಾಲ್ವೆಸ್ಟನ್ ದ್ವೀಪ ನಗರದ ಸೇತುವೆಗೆ ಬಂಕರ್ ಬಾರ್ಜ್ (Bunker Barge) ಡಿಕ್ಕಿ ಹೊಡೆದು ಸುಮಾರು 2,000 ಗ್ಯಾಲನ್ ತೈಲ ಮೆಕ್ಸಿಕೊ ಕೊಲ್ಲಿಗೆ ಹರಿದಿರಬಹುದು ಎಂದು ಯುಎಸ್ ಕೋಸ್ಟ್ ಗಾರ್ಡ್ ಅಂದಾಜಿಸಿದೆ. ಅಪಘಾತದ ನಂತರ ಬಾರ್ಜ್ನಿಂದ ತೈಲ ಸೋರಿಕೆಯನ್ನು ನಿಯಂತ್ರಿಸಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ವರದಿ ಮಾಡಿದೆ.
ಗಲ್ಫ್ ಇಂಟ್ರಾಕೋಸ್ಟಲ್ ಜಲಮಾರ್ಗದ (Gulf Intracoastal Waterway) ಉದ್ದಕ್ಕೂ ಸುಮಾರು 6.5 ಮೈಲಿ (10.5 ಕಿ.ಮೀ) ಪ್ರದೇಶವನ್ನು ಪ್ರಯಾಣಕ್ಕೆ ಮುಚ್ಚಲಾಗಿದ್ದು, ತೈಲ ಸೋರಿಕೆಯ ವ್ಯಾಪ್ತಿಯನ್ನು ಪರಿಶೀಲನೆ ಮಾಡಲು ವಿಮಾನಗಳು ಮತ್ತು ಡ್ರೋನ್ಗಳನ್ನು ನಿಯೋಜಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಗಾಲ್ವೆಸ್ಟನ್ ಟೆಕ್ಸಾಸ್ನ ಅತಿದೊಡ್ಡ ನಗರವಾದ ಹೂಸ್ಟನ್ ಡೌನ್ಟೌನ್ನಿಂದ ಸುಮಾರು 50 ಮೈಲಿ (80.5 ಕಿ.ಮೀ) ದೂರದಲ್ಲಿದೆ.
"ನಾವು ಆರಂಭದಲ್ಲಿ ಅಂದಾಜಿಸಿದ್ದಕ್ಕಿಂತ ಕಡಿಮೆ ತೈಲ ನೀರಿಗೆ ಹರಿದಿದೆ ಎಂಬ ವಿಶ್ವಾಸ ನಮ್ಮದಾಗಿದೆ" ಎಂದು ಕೋಸ್ಟ್ ಗಾರ್ಡ್ ಕ್ಯಾಪ್ಟನ್ ಕೀತ್ ಡೊನೊಹ್ಯೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ನಾವು ಈ ಪ್ರದೇಶದಿಂದ 605 ಗ್ಯಾಲನ್ ಎಣ್ಣೆಯುಕ್ತ ನೀರಿನ ಮಿಶ್ರಣವನ್ನು ಹೊರತೆಗೆದಿದ್ದೇವೆ ಮತ್ತು ಸೋರಿಕೆಯಾಗದ ಬಾರ್ಜ್ನ ಮೇಲ್ಭಾಗದಲ್ಲಿದ್ದ 5,640 ಗ್ಯಾಲನ್ ತೈಲವನ್ನು ಸುರಕ್ಷಿತವಾಗಿ ಹೊರತೆಗೆದಿದ್ದೇವೆ" ಎಂದು ಡೊನೊಹ್ಯೂ ಹೇಳಿದರು.