ಢಾಕಾ:ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಕನಿಷ್ಠ 49 ಶಿಕ್ಷಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಬಲವಂತದಿಂದ ಇವರು ರಾಜೀನಾಮೆ ಕೊಡುವಂತೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಒಕ್ಯ ಪರಿಷತ್ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛಾತ್ರ ಒಕ್ಯ ಪರಿಷತ್ ಶನಿವಾರ ಜತಿಯಾ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಂಘಟನೆಯ ಸಂಯೋಜಕ ಸಜೀಬ್ ಸರ್ಕಾರ್ ಹೇಳಿದ್ದಾರೆ. ಇದರಲ್ಲಿ ದಾಳಿಗಳು, ಲೂಟಿ, ಮಹಿಳೆಯರ ಮೇಲಿನ ಹಲ್ಲೆಗಳು, ದೇವಾಲಯಗಳ ವಿಧ್ವಂಸಕ ಕೃತ್ಯಗಳು, ಮನೆಗಳು ಮತ್ತು ವ್ಯಾಪಾರಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಮತ್ತು ಕೊಲೆಗಳು ಸೇರಿವೆ ಎಂದು ಅವರು ಹೇಳಿದರು.
ದೇಶಾದ್ಯಂತ ಅಲ್ಪಸಂಖ್ಯಾತ ಶಿಕ್ಷಕರ ಮೇಲೆ ದೈಹಿಕ ಹಲ್ಲೆಗಳು ನಡೆದಿವೆ. ಆಗಸ್ಟ್ 30ರ ಹೊತ್ತಿಗೆ ಕನಿಷ್ಠ 49 ಶಿಕ್ಷಕರಿಂದ ಬಲವಂತದಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ಸರ್ಕಾರ್ ಬಹಿರಂಗಪಡಿಸಿದರು. ಆದಾಗ್ಯೂ, ಅದರಲ್ಲಿನ 19 ಶಿಕ್ಷಕರನ್ನು ಪುನಃ ನೇಮಿಸಲಾಗಿದೆ ಎಂದು ಅವರು ಹೇಳಿದರು.