ಬಂಡಂಗ್ (ಇಂಡೋನೇಷ್ಯಾ):ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಕೆಲ ಕಾರುಗಳು ಮತ್ತು ಮೂರು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಾವಾ ದ್ವೀಪದಲ್ಲಿ ನಡೆದಿದೆ.
ಅಪಘಾತ ಸಂಭವಿಸಿದಾಗ ಶಾಲಾ ಬಸ್ನಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು. ಈ ಬಸ್ ಜಾವಾ ದ್ವೀಪದ ಪಟ್ಟಣವಾದ ಡಿಪೋಕ್‌ನಿಂದ ಜನಪ್ರಿಯ ಪ್ರವಾಸಿ ತಾಣವಾದ ಲೆಂಬಾಂಗ್‌ಗೆ ಪ್ರವಾಸಕ್ಕೆ ಬಂದಿದ್ದರು. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಪ್ರವಾಸದಿಂದ ಹಿಂದಿರುಗಿ ಕರೆದುಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಶನಿವಾರ ಸಂಜೆ 6.48ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಪಶ್ಚಿಮ ಜಾವಾ ಪೊಲೀಸ್ ವಕ್ತಾರ ಜೂಲ್ಸ್ ಅಬ್ರಹಾಂ ಅಬಾಸ್ಟ್ ಹೇಳಿದ್ದಾರೆ.
ಇದು ಇಳಿಜಾರಿನ ರಸ್ತೆ ಆಗಿದ್ದು, ಬಸ್‌ನ ನಿಯಂತ್ರಣ ತಪ್ಪಿ ಲೇನ್‌ಗಳನ್ನು ದಾಟಿ ಹಲವಾರು ಕಾರುಗಳು ಮತ್ತು ಮೋಟಾರ್‌ಬೈಕ್‌ಗಳಿಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿತು. ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಶಿಕ್ಷಕ ಮತ್ತು ಸ್ಥಳೀಯ ವಾಹನ ಚಾಲಕ ಸೇರಿದಂತೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು 53 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಕಾರಣವನ್ನು ತಿಳಿಯಲು ತನಿಖೆ ಮಾಡುತ್ತಿದ್ದೇವೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಬ್ರೇಕ್‌ಗಳು ಫೇಲ್ ಆಗಿದ್ದವು ಎಂದು ಅನುಮಾನ ಮೂಡಿದೆ ಎಂದು ಅಬಾಸ್ಟ್ ಹೇಳಿದರು.
ಕಳಪೆ ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯದಿಂದಾಗಿ ಇಂಡೋನೇಷ್ಯಾದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ಕಳೆದ ವರ್ಷ ಪೂರ್ವ ಜಾವಾದಲ್ಲಿ ಹೆದ್ದಾರಿಯೊಂದರಲ್ಲಿ ಟೂರಿಸ್ಟ್ ಬಸ್ ಅಪಘಾತಕ್ಕೀಡಾಗಿ ಕನಿಷ್ಠ 14 ಜನರು ಸಾವನ್ನಪ್ಪಿದರು ಮತ್ತು 19 ಮಂದಿ ಗಾಯಗೊಂಡಿದ್ದರು. 2021 ರಲ್ಲಿ, ಟೂರಿಸ್ಟ್ ಬಸ್‌ನ ಬ್ರೇಕ್‌ಗಳು ಫೇಲ್ ಆಗಿದ್ದರಿಂದ ಪಶ್ಚಿಮ ಜಾವಾ ಗುಡ್ಡಗಾಡು ರೆಸಾರ್ಟ್‌ನ ಪನ್‌ಕಾಕ್‌ನಲ್ಲಿ ಕಂದಕಕ್ಕೆ ಬಿದ್ದಿತ್ತು. ಆಗ ಕನಿಷ್ಠ 27 ಜನರು ಸಾವನ್ನಪ್ಪಿದ್ದರು ಮತ್ತು 39 ಮಂದಿ ಗಾಯಗೊಂಡಿದ್ದರು.
ಓದಿ:'ರಾಧಾ ರಮಣ' ನಟಿ ಪವಿತ್ರಾ ಜಯರಾಮ್ ರಸ್ತೆ ಅಪಘಾತದಲ್ಲಿ ದುರ್ಮರಣ - Pavitra Jayaram