ಇಸ್ಲಾಮಾಬಾದ್: ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇಸ್ಲಾಮಾಬಾದ್ನ ಅಧ್ಯಕ್ಷೀಯ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಅವರು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.
ನಿರ್ಗಮಿತ ಅಧ್ಯಕ್ಷ ಆರಿಫ್ ಅಲ್ವಿ, ಪ್ರಧಾನಿ ಶೆಹಬಾಜ್ ಷರೀಫ್, ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಾಜಕಾರಣಿಗಳು ಮತ್ತು ವಿದೇಶಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಶನಿವಾರ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಂಸದೀಯ ಪಕ್ಷದ ಜಂಟಿ ಅಧ್ಯಕ್ಷ ಜರ್ದಾರಿ ಅವರು ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳು ಸೇರಿದಂತೆ ಎಲ್ಲಾ ಚುನಾವಣಾ ವಿಭಾಗಗಳಿಂದ ತಮ್ಮ ಪರವಾಗಿ 411 ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ತಿಳಿಸಿದೆ. ಜರ್ದಾರಿ ವಿರುದ್ಧವಾಗಿ 181 ಮತಗಳು ಬಂದಿವೆ.
ಆಡಳಿತಾರೂಢ ಮೈತ್ರಿ ಅಭ್ಯರ್ಥಿ ಜರ್ದಾರಿ ಸೆನೆಟ್ ಮತ್ತು ರಾಷ್ಟ್ರೀಯ ಅಸೆಂಬ್ಲಿ ಸೇರಿದಂತೆ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ 255 ಮತ, ಪೂರ್ವ ಪಂಜಾಬ್ ಪ್ರಾಂತ್ಯದಿಂದ 43 ಮತ, ವಾಯುವ್ಯ ಖೈಬರ್ ಪಖ್ತುನಖ್ವಾ ಪ್ರಾಂತ್ಯದಿಂದ ಎಂಟು, ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದಿಂದ 47 ಮತ ಮತ್ತು ದಕ್ಷಿಣ ಸಿಂಧ್ ಪ್ರಾಂತ್ಯದಿಂದ 58 ಮತಗಳನ್ನು ಪಡೆದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದು ಪಾಕಿಸ್ತಾನದ ಅಧ್ಯಕ್ಷರಾಗಿ ಜರ್ದಾರಿ ಅವರ ಎರಡನೇ ಅವಧಿಯಾಗಿದೆ. 68 ವರ್ಷದ ಜರ್ದಾರಿ 2008 ರಿಂದ 2013 ರವರೆಗೆ ದೇಶದ 11 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೇಶದ ಇತಿಹಾಸದಲ್ಲಿ ಎರಡನೇ ಬಾರಿಗೆ ಈ ಹುದ್ದೆಗೇರಿದ ಮೊದಲ ನಾಯಕನಾಗಿದ್ದಾರೆ. ತಮ್ಮ ಐದು ವರ್ಷಗಳ ಸಾಂವಿಧಾನಿಕ ಅವಧಿಯನ್ನು ಪೂರ್ಣಗೊಳಿಸಿದ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಲ್ವರು ಅಧ್ಯಕ್ಷರಲ್ಲಿ ಜರ್ದಾರಿ ಕೂಡ ಒಬ್ಬರು.
1955 ರಲ್ಲಿ ಜನಿಸಿದ ಜರ್ದಾರಿ ಕರಾಚಿಯಲ್ಲಿ ಬೆಳೆದರು ಮತ್ತು ಶಿಕ್ಷಣ ಪಡೆದರು. ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಪುತ್ರಿ ಬೆನಜೀರ್ ಭುಟ್ಟೋ ಅವರನ್ನು ಜರ್ದಾರಿ ವಿವಾಹವಾಗಿದ್ದರು. 2007ರ ಡಿಸೆಂಬರ್ ನಲ್ಲಿ ಬಾಂಬ್ ಸ್ಫೋಟಿಸಿ ಬೆನಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಲಾಯಿತು.
ಇದನ್ನೂ ಓದಿ : ಯುದ್ಧ ಸ್ಥಿತಿ ಇನ್ನಷ್ಟು ಜಟಿಲಗೊಳಿಸಲು ಹಮಾಸ್ ಯತ್ನ: ಇಸ್ರೇಲ್ ಆರೋಪ