ಚಿಲಿ(ದಕ್ಷಿಣ ಅಮೆರಿಕ): ಏರುತ್ತಿರುವ ತಾಪಮಾನದಿಂದ ಮಧ್ಯ ಚಿಲಿಯಲ್ಲಿ ಉಂಟಾಗಿರುವ ಕಾಳ್ಗಿಚ್ಚುನಿಂದ ಸಾವನ್ನಪ್ಪಿದವರ ಸಂಖ್ಯೆ ಮಂಗಳವಾರದ ವೇಳೆಗೆ 131 ಕ್ಕೆ ಏರಿದ್ದು, 300 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. 2010 ರಲ್ಲಿ ಸಂಭವಿಸಿದ ಭೂಕಂಪದ ನಂತರ ಈ ಕಾಳ್ಗಿಚ್ಚು ವಾಲ್ಪಾರೈಸೊದಲ್ಲಿನ ಅತ್ಯಂತ ಭೀಕರ ವಿಪತ್ತು ಎಂದು ಹೇಳಲಾಗುತ್ತಿದೆ.
ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಈ ಪ್ರದೇಶಕ್ಕೆ ಭೇಟಿ ನೀಡಿದ್ದು 2023 ರ ಪ್ಯಾನ್ ಅಮೆರಿಕನ್ ಗೇಮ್ಸ್‌ಗೆ ಬಳಸಿದ ಪೀಠೋಪಕರಣಗಳನ್ನು ಸಂತ್ರಸ್ತರಿಗೆ ದಾನ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಹಾಗೇ 9,200 ಸಂತ್ರಸ್ತ ಮನೆಗಳ ನೀರಿನ ಬಿಲ್‌ಗಳನ್ನು ಸಹ ಸರ್ಕಾರ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಹೆಸರುವಾಸಿಯಾದ ಬೀಚ್ ರೆಸಾರ್ಟ್ ವಿನಾ ಡೆಲ್ ಮಾರ್‌ನ ಪರ್ವತ ಪೂರ್ವ ಅಂಚಿನಿಂದ ಈ ಕಾಳ್ಗಿಚ್ಚು ಹೊತ್ತಿಕೊಂಡಿದ್ದು, ಬಳಿಕ ಸಂಪೂರ್ಣ ಅರಣ್ಯ ಪ್ರದೇಶವನ್ನು ಆವರಿಸಿಕೊಂಡಿದೆ. ಹೀಗೆ ಆವರಿಸಿಕೊಂಡ ಕಾಳ್ಗಿಚ್ಚು ಹವಾಮಾನ ಮತ್ತು ಬಲವಾದ ಗಾಳಿಯಿಂದಾಗಿ ಇತರ ಎರಡು ಪಟ್ಟಣಗಳಾದ ಕ್ವಿಲ್ಪೆ ಮತ್ತು ವಿಲ್ಲಾ ಅಲೆಮಾನಾಕ್ಕೂ ತ್ವರಿತವಾಗಿ ಹರಡಿಕೊಂಡಿದ್ದರಿಂದ ಈ ಎರಡು ಪಟ್ಟಣಗಳು ತೀವ್ರವಾಗಿ ಹಾನಿಗೊಳಗಾಗಿವೆ. ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ಅಲ್ಲಿನ ಸರ್ಕಾರ ಬೆಂಕಿ ನಂದಿಸಲು ನಿರಂತರ ಕಾರ್ಯಾಚರಣೆ ಕೈಗೊಂಡಿದೆ. ಇನ್ನು ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಮಾಡಲು ಭದ್ರತಾ ಸಿಬ್ಬಂದಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಇಲ್ಲಿನ ವಿನಾ ಡೆಲ್ ಮಾರ್ ಉತ್ಸವವನ್ನು ರದ್ದು ಮಾಡಲಾಗಿದೆ.